ಶಿವಮೊಗ್ಗ:ರಾಜ್ಯ ಮಾತ್ರವಲ್ಲದೆ ದೇಶದೆಲ್ಲೆಡೆ ಸುದ್ದಿ ಮಾಡಿದ್ದ ಬಜರಂಗದಳದ ಕಾರ್ಯಕರ್ತ ಶಿವಮೊಗ್ಗದ ಹರ್ಷನ ಹತ್ಯೆ ಪ್ರಕರಣವನ್ನು ಇತ್ತೀಚೆಗೆ ಎನ್ಐಎ ತಂಡಕ್ಕೆ ವರ್ಗಾಯಿಸಲಾಗಿತ್ತು. ಇದೀಗ ಪ್ರಕರಣದ ತನಿಖೆಗೆ ಎನ್ಐಎ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ. ನಿನ್ನೆ ತಡರಾತ್ರಿ ಶಿವಮೊಗ್ಗಕ್ಕೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ತಂಡ ತಂಗಿದೆ. ಇದುವರೆಗೆ ಸಿಇಎನ್ ಠಾಣೆ ಪೊಲೀಸರು ನಡೆಸುತ್ತಿದ್ದ ಹರ್ಷನ ಹತ್ಯೆ ತನಿಖೆಯನ್ನು ಇಂದು ಅಧಿಕೃತವಾಗಿ ಎನ್ಐಎ ವಹಿಸಿಕೊಳ್ಳಲಿದೆ. ಇಂದು ಸಿಇಎನ್ ಠಾಣೆಗೆ ತೆರಳಿ ಪ್ರಕರಣದ ಮಾಹಿತಿ ಹಾಗೂ ದಾಖಲೆಗಳನ್ನು ತಂಡ ಪಡೆಯಲಿದೆ. ಇಂದಿನಿಂದ ತನಿಖೆ ಪ್ರಾರಂಭಿಸಲಿರುವ ತಂಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡ ಸ್ಥಳ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.
ಪ್ರಕರಣ ಹಿನ್ನೆಲೆ:ಶಿವಮೊಗ್ಗದ ಭಾರತಿ ಕಾಲನಿಯಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷನನ್ನು ಫೆಬ್ರುವರಿ 20ರಂದು ರಾತ್ರಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಹತ್ಯೆ ವಿರುದ್ಧ ಹಲವಾರು ಕಡೆ ಪ್ರತಿಭಟನೆಗಳು, ಕಲ್ಲು ತೂರಾಟ, ಬೆಂಕಿ ಹಚ್ಚಿದಂತಹ ಘಟನೆಗಳು ನಡೆದಿವೆ. ಹರ್ಷ ಅವರ ತಾಯಿ ಹತ್ಯೆಗೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರಿಗೆ ದೂರು ನೀಡಿದ್ದಾರೆ. ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ ಅಡಿ ಕೇಸು ದಾಖಿಲಿಸಿಕೊಂಡಿದ್ದ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.