ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಿರುವ ಪೊಲೀಸರಿಗೆ ಸಂಸದ ಬಿ.ವೈ. ರಾಘವೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಹರ್ಷ ಅವರ ಮೃತದೇಹದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಶಿವಮೊಗ್ಗ ಶಾಂತಿಗೆ ಹೆಸರುವಾಸಿಯಾದ ನಗರ. ಆದರೆ ಕಲ್ಲು ತೂರಾಟದಿಂದ ಕೆಟ್ಟ ಸಂದೇಶ ಹೋಗಿದೆ. ಇದಕ್ಕೆ ಮೂಲ ಕಾರಣರಾದವರನ್ನು ಬಂಧಿಸಬೇಕು. ಕಾನೂನು ರೀತಿಯಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದರು.
ಈ ಘಟನೆಯಾದ ಮೇಲೆ ಸಾಂತ್ವನ ಹೇಳುವ ದುಸ್ಥಿತಿ ಬರಬಾರದು. ಈ ರೀತಿಯ ಘಟನೆಗಳು ಮುಂದೆ ಆಗದಂತೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಸರ್ಕಾರ, ಜಿಲ್ಲಾಡಳಿತ ಯೋಚಿಸುವ ಕಾಲ ಬಂದಿದೆ. ಮುಂದೆ ಈ ರೀತಿ ಆಗದಂತೆ ಏನು ಮಾಡಬೇಕು ಅಂತ ನಾವು ಸಹ ಗಮನ ಹರಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಆರೋಪ ಸುಳ್ಳು: ಮೃತದೇಹದ ಮೆರವಣಿಗೆ ವೇಳೆಯ ಗಲಾಟೆಗೆ ನಾವು ಕಾರಣರಲ್ಲ. ಅಂದು ಸೆಕ್ಷನ್ 144 ಇದ್ದ ಕಾರಣ ದೊಡ್ಡ ಅನಾಹುತ ನಡೆದಿದೆ. ಯಾರೂ ಸಹ ಜನರ ಭಾವನೆಗಳ ಜೊತೆ ಚೆಲ್ಲಾಟ ಆಡೋದಿಕ್ಕೆ ಬರಲ್ಲ. ತುಂಬಾ ಸೂಕ್ಷ್ಮವಾಗಿ ಎಲ್ಲ ಅಂಶವನ್ನು ತೆಗೆದುಕೊಂಡು ಹೋಗಬೇಕಿತ್ತು. ಈ ಸಂದರ್ಭದಲ್ಲಿ ಜನರ ಆಕ್ರೋಶ ತಡೆಯಲು ಆಗಲಿಲ್ಲ ಎಂದರು.
ಇದನ್ನೂ ಓದಿ:ಹರ್ಷ ಹತ್ಯೆ ಪ್ರಕರಣದಲ್ಲಿ 8 ಮಂದಿ ಬಂಧನ: ಡಿಜಿಪಿಗೆ ಪತ್ರ ಬರೆದ ಆರಗ ಜ್ಞಾನೇಂದ್ರ
ಹರ್ಷನ ಅಂತಿಮ ಸಂಸ್ಕಾರ ಶಾಂತಿಯುತವಾಗಿ ನಡೆಯಲು ಎಲ್ಲ ಕ್ರಮ ತೆಗೆದುಕೊಂಡಿದ್ದೆವು. ನಮ್ಮ ನಾಯಕರಾದ ಈಶ್ವರಪ್ಪನವರ ನೇತೃತ್ವದಲ್ಲಿ ನಾನು ಹಾಗೂ ನಮ್ಮ ನಾಯಕರುಗಳು ಒಟ್ಟಾಗಿ ಶಾಂತಿಯುತವಾಗಿ ಎಲ್ಲವನ್ನು ನೆರವೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದೆವು. ಪೊಲೀಸ್ ಇಲಾಖೆಯ ಜೊತೆ ಕೈ ಜೋಡಿಸುವ ಕೆಲಸ ಮಾಡಿದ್ದೆವು. ಪೊಲೀಸ್ ಇಲಾಖೆ ಮೆರವಣಿಗೆ ಬೇಡ ಎಂದು ಹೇಳಿದ್ದರು. ಆದರೂ ಅದನ್ನು ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ. ನಾವೆಲ್ಲ ಪೊಲೀಸರಿಗೆ ಸಹಕಾರ ನೀಡಿದ್ದೇವೆ ಎಂದು ತಿಳಿಸಿದರು.