ಶಿವಮೊಗ್ಗ:ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಹೊಸ ಯೋಜನೆಗಳು ಮತ್ತು ಕಾರ್ಯಕ್ರಮದ ಮೂಲಕ ಕಾರ್ಮಿಕರ ಜೀವನದಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಕಾರ್ಮಿಕ ಇಲಾಖೆಯ ಮೂಲಕ ಮಾಡುತ್ತಿದೆ. ನಮ್ಮ ಸರ್ಕಾರ ಕಾರ್ಮಿಕರ ಬದುಕನ್ನು ಹಸನು ಮಾಡಲು ಪಣ ತೊಟ್ಟಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಕಟ್ಟಡ ಕಲ್ಯಾಣ ಮಂಡಳಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣೆ, ತರಬೇತಿ ಮತ್ತು ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಯನ್ನು ಸಚಿವ ಶಿವರಾಮ್ ಹೆಬ್ಬಾರ್ ಉದ್ಘಾಟನೆ ಬಳಿಕ ಮಾತನಾಡಿದರು.
ಕಾರ್ಮಿಕರ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಇಲಾಖೆ ಒಟ್ಟು 750 ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಉಚಿತ ತರಬೇತಿ ನೀಡುವ ಯೋಜನೆ, ಎಸ್ಎಸ್ಎಲ್ಸಿಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 15 ಸಾವಿರ ರೂ. ಗೌರವಧನ ಹಾಗೂ 10 ಸಾವಿರ ಬೋನಸ್ ಸೇರಿ ಒಟ್ಟು 25 ಸಾವಿರ ಘೋಷಿಸಿದೆ. 2,591 ಮಕ್ಕಳು 600 ಕ್ಕಿಂತ ಹೆಚ್ಚು ಅಂಕ ಪಡೆದಿರುವುದು ಶ್ಲಾಘನೀಯ ಎಂದರು. ಈ ವರ್ಷದಲ್ಲಿ ಸುಮಾರು 37 ಲಕ್ಷ ರೂ. ವೆಚ್ಚದಲ್ಲಿ 18 ತಿಂಗಳ ಪೈಲಟ್ ತರಬೇತಿಯನ್ನು ಕಾರ್ಮಿಕರ ಮಕ್ಕಳಿಗೆ ನೀಡಲಾಗುವುದು ಎಂದು ತಿಳಿಸಿದರು.