ಶಿವಮೊಗ್ಗ:ವಸ್ತ್ರ ಸಂಹಿತೆಯ ಬಗ್ಗೆ ಮಾತನಾಡುವ ಧಾವಂತದಲ್ಲಿ ಪ್ರಿಯಾಂಕಾ ಗಾಂಧಿ ಅವರು 'ಬಿಕಿನಿ ಬೇಕಾದರೂ ಹಾಕಿಕೊಳ್ಳಲಿ' ಎಂದಿದ್ದರು. ಅವರಿಗೆ ಎಲ್‌ಕೆಜಿ ಮಕ್ಕಳು ಹೋಗಿ ಪಾಠ ಹೇಳಿಕೊಡಬೇಕಿದೆ. ಯಾರಾದರೂ ಶಾಲೆಗಳಿಗೆ ಅಂತಹ ಬಟ್ಟೆಗಳನ್ನು ಧರಿಸಿ ಬರುತ್ತಾರೆಯೇ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರಾದ ಅವರು ಹೇಳಿಕೆಗಳನ್ನು ನೀಡುವಾಗ ಪರಿಜ್ಞಾನ ಇರಬೇಕು. ಜತೆಗೆ, ಹಿಜಾಬ್, ಹಲಾಲ್ ಮತ್ತು ಆಜಾನ್ ಎಲ್ಲವೂ ಬಿಜೆಪಿ ಸೃಷ್ಟಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಆದರೆ, ಅದೆಲ್ಲದ್ದಕ್ಕೂ ಕುಮ್ಮಕ್ಕು ನೀಡಿದ್ದು ಯಾರು?, ಆರು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ವಿವಾದ ಸೃಷ್ಟಿ ಮಾಡಿ ಎಂದು ಹೇಳಿದ್ದು ಯಾರು?, ಮೆಕ್ಕಾ ಕಡೆಗೆ ಮುಖ ಮಾಡಿ ಹಲಾಲ್ ಮಾಡಿ ಎಂದಿದ್ದು ಯಾರು?, ಎಲ್ಲವನ್ನೂ ಕಾಂಗ್ರೆಸ್‌ನವರೇ ಮಾಡಿ ಬಿಜೆಪಿಯ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಕೋರ್ಟ್ ಆದೇಶ ಇದ್ದರೂ ದತ್ತ ಪೀಠದಲ್ಲಿ ಮಾಂಸಾಹಾರ ತಿನ್ನುತ್ತಾರೆಂದರೆ ಅವರಿಗೆಷ್ಟು ಸೊಕ್ಕು ಇರಬೇಕು. ಇದನ್ನು ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಾದಿಯಾಗಿ ಯಾರೊಬ್ಬರೂ ಖಂಡಿಸಿಲ್ಲ. ಅನ್ಯಕೋಮಿನವರು ಏನೇ ತಪ್ಪುಗಳನ್ನು ಮಾಡಿದರೂ ಅದಕ್ಕೆ ಚಕಾರ ಎತ್ತುವುದಿಲ್ಲ. ಕೋರ್ಟ್ ಆದೇಶಕ್ಕೆ ಬೆಲೆ ಕೊಡದವರಿಗೆ ಬೆಂಬಲವಾಗಿ ಕಾಂಗ್ರೆಸ್ ನಿಲ್ಲುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರೇ ರಾಜ್ಯದಲ್ಲಿ ರಾಷ್ಟ್ರದ್ರೋಹಿಗಳು ಎಂದು ಈಶ್ವರಪ್ಪ ಕಿಡಿ ಕಾರಿದರು.