ಶಿವಮೊಗ್ಗ: ನಗರದ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ದುರಸ್ತಿ ಕಾಮಗಾರಿಗಳನ್ನು ವೀಕ್ಷಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸರ್ಕಾರಿ ಶಾಲೆಗಳ ದುರಸ್ತಿ ಕಾರ್ಯ ವೀಕ್ಷಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಜೋಸೆಫ್ ನಗರ, ಬಸವನಗುಡಿ, ವೆಂಕಟೇಶ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರ ಜೊತೆ ಶಾಲೆಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ 87 ಸರ್ಕಾರಿ ಶಾಲೆಗಳ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದ್ದು, 15 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಮುಗಿಸಲಾಗಿದೆ. ಹಾಗಾಗಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು.
ಈಗಾಗಲೇ 36 ಶಾಲೆಗಳ ದುರಸ್ತಿ ಕಾಮಗಾರಿಗಳು ಮುಗಿದಿದ್ದು, ಇನ್ನುಳಿದ ಶಾಲೆಗಳ ದುರಸ್ತಿ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಮುಗಿಸಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳ ದುರಸ್ತಿ ಕಾಮಗಾರಿ ವೀಕ್ಷಿಸಿದ ಸಚಿವ ಈಶ್ವರಪ್ಪ ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳಿಧರ್, ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.