ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮದ ಗುಡ್ಡಕುಸಿತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಹೆಗಲತ್ತಿ ಗುಡ್ಡಕುಸಿತ ಪ್ರಕರಣ: ಒಂದು ವರ್ಷದ ನಂತರ ಪರಿಹಾರದ ಭರವಸೆ ಕಳೆದ ವರ್ಷ ಆಗಸ್ಟ್ 9ರಂದು ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮದ ಶಂಕರ ಪೂಜಾರಿ ಹಾಗೂ ಅವರ ಸಹೋದರನ ಅಡಿಕೆ ತೋಟಗಳು ಗುಡ್ಡ ಕುಸಿತದಿಂದ ರಾತ್ರಿ ಬೆಳಗಾಗುವುದರೊಳಗೆ ನೆಲಸಮವಾಗಿದ್ದವು. ಬಳಿಕ ಸಿಎಂ ಯಡಿಯೂರಪ್ಪ ಬಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು ಬಿಟ್ಟರೆ, ಪರಿಹಾರದ ಹಣ ತಲುಪಿರಲಿಲ್ಲ.
ಒಂದು ವರ್ಷದ ಬಳಿಕ ಸಚಿವ ಕೆ.ಎಸ್.ಈಶ್ವರಪ್ಪ ಹೆಗಲತ್ತಿ ಗ್ರಾಮದ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದ್ದು, ಹಾಳಾದ ಅಡಿಕೆ ತೋಟ ಮರು ನಿರ್ಮಾಣಕ್ಕೆ ಸರ್ಕಾರದ ಕಡೆಯಿಂದ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ವತಿಯಿಂದ ಮಾಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಡಿಕೆ ತೋಟ ನಿರ್ಮಿಸಿ ಕೊಡುವಂತೆ ಜಿ.ಪಂ ಸಿಇಓ ಶ್ರೀಮತಿ ವೈಶಾಲಿ ಹಾಗೂ ತೋಟಗಾರಿಕಾ ಇಲಾಖೆಗೆ ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ನಿಂತ ನಂತರ ಗುಡ್ಡ ಕುಸಿದು ಹಾಳಾದ ಅಡಿಕೆ ತೋಟಗಳನ್ನು ಮರು ನಿರ್ಮಾಣ ಮಾಡಲು ಅಡಿಕೆ ಸಸಿ ಹಾಕಿ ಕೊಡಲಾಗುವುದು. ಅಲ್ಲದೇ, ಗುಡ್ಡದ ಕಲ್ಲುಬಂಡೆ, ಮರದ ತುಂಡುಗಳನ್ನು ಎತ್ತಿ ನೆಲ ಸಮತಟ್ಟು ಮಾಡಿ, ಕೃಷಿ ಮಾಡಲು ಅನುಕೂಲ ಮಾಡಲಾಗುವುದು ಎಂದರು. ಈ ವೇಳೆ ಶಾಸಕ ಆರಗ ಜ್ಞಾನೇಂದ್ರ ಸೇರಿ ಇತರೆ ಅಧಿಕಾರಿಗಳು ಹಾಜರಿದ್ದರು.