ಶಿವಮೊಗ್ಗ:ಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಕೆಳಗೆ ನಡೆದ ಕಾಮಗಾರಿಯ ಕುರಿತು ವರದಿ ನೀಡಲು ಮೂವರು ನಿವೃತ್ತ ಮುಖ್ಯ ಇಂಜಿನಿಯರ್‌ಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ರಾಜ್ಯ ಸರ್ಕಾರವು ವಿಶ್ವಬ್ಯಾಂಕ್ ನೆರವಿನೊಂದಿಗೆ 2016-17ರಲ್ಲಿ ರಾಜ್ಯದ ಎಲ್ಲ ಜಲಾಶಯಗಳ ದುರಸ್ತಿಗೆ ಕ್ರಮ ಕೈಗೊಂಡಿತ್ತು. ಇದೇ ಯೊಜನೆಯಲ್ಲಿ ಭದ್ರಾ ಜಲಾಶಯದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಅದರಲ್ಲಿ ಪ್ರಮುಖವಾಗಿ ಜಲಾಶಯದ ಕ್ರಸ್ಟ್ ಗೇಟ್ಗಳಿಂದ ನದಿಗೆ ನೀರು ಧುಮುಕುವ ಜಾಗದ ಕೆಳಗೆ ಸ್ಟಿಲ್ಲಿಂಗ್ ಬೇಸಿನ್ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಹಿಂದೆ ಮಾಡಿದ ಸ್ಟಿಲ್ಲಿಂಗ್ ಬೇಸಿನ್ ಗಟ್ಟಿಯಾಗಿದ್ದರೂ ಅದನ್ನು ಒಡೆದು ಹಾಕಲಾಗಿತ್ತು. ಗಟ್ಟಿಮುಟ್ಟಾಗಿದ್ದ ಸ್ಟಿಲ್ಲಿಂಗ್ ಬೇಸಿನ್ ಗಾರೆ ಒಡೆಯುವಾಗಲೇ ವಿರೋಧ ವ್ಯಕ್ತವಾಗಿತ್ತು. ಆದರೂ ಯಂತ್ರಗಳನ್ನು ಬಳಸಿ ಸತತ ಒಂದು ತಿಂಗಳು ಕಷ್ಟಪಟ್ಟು ಮೇಲ್ಭಾಗದ ಸ್ವಲ್ಪ ಗಾರೆಯನ್ನು ಒಡೆದು ಹೊಸದಾಗಿ ಕಬ್ಬಿಣ ಹಾಗೂ ಸಿಮೆಂಟ್ ಬಳಸಿ ಕಾಂಕ್ರೀಟ್ ಹಾಕಲಾಗಿತ್ತು. ಆದರೆ, ಹೀಗೆ ಹಾಕಿದ ಕಾಂಕ್ರೀಟ್ ಕೇವಲ ಎರಡೇ ವರ್ಷದಲ್ಲಿ ಕಿತ್ತು ಹೋಗಿದೆ. ಹೀಗಾಗಿ, ಜಲಾಶಯಕ್ಕೆ ಅಪಾಯ ಎದುರಾಗಿದೆ.