ಶಿವಮೊಗ್ಗ:ಗ್ರಾಮ ಪಂಚಾಯತ್ನಿಂದ ಹಿಡಿದು ಪ್ರಧಾನಮಂತ್ರಿವರೆಗೆ ಬಿಜೆಪಿಯವರೇ ಇದ್ದಾರೆ. ಈಗ ನಮ್ಮ ಕಾರ್ಯಕರ್ತರನ್ನು ಮುಟ್ಟಿದರೆ ಸುಮ್ಮನಿರಬೇಕಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಭಾನುವಾರ ತಾವು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈಶ್ವರಪ್ಪ ನಿನ್ನೆ 'ನಮ್ಮ ಕಾರ್ಯಕರ್ತರ ಮೈಮುಟ್ಟಿ ನೋಡಲಿ, ಅದರ ಪರಿಣಾಮವೇ ಬೇರೆ' ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಇಂದು ಆ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ನಾನು ನನ್ನ ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ. ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ನಾನೇನು ತಪ್ಪು ಹೇಳಿಕೆ ನೀಡಿಲ್ಲ. ನಾನು ಬಹಿರಂಗವಾಗಿ ಸಾರ್ವಜನಿಕ ಸಭೆಯಲ್ಲಿ ಈ ಹೇಳಿಕೆ ನೀಡಿಲ್ಲ. ನಮ್ಮ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡಿದ್ದೇನೆ. ಯಾರಾದ್ರೂ ನಮ್ಮ ಕಾರ್ಯಕರ್ತರನ್ನು ಮುಟ್ಟಿದರೆ ನಾವು ಸುಮ್ಮನಿರಬೇಕಾ ಎಂದು ಪ್ರಶ್ನಿಸಿದರು.