ಶಿವಮೊಗ್ಗ:ನಮ್ಮ ದೇಶದಲ್ಲಿ ಸಂವಿಧಾನ ಹಾಗೂ ಕೋರ್ಟ್ ಇದೆ. ಇವೆರಡು ಹೇಳಿದ್ದನ್ನು ಎಲ್ಲಾ ಪ್ರಜೆಗಳು ಕೇಳಬೇಕು ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತಾ ತರುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರು ಮುಸಲ್ಮಾನರನ್ನು ತೃಪ್ತಿ ಪಡಿಸಲು ಸಂವಿಧಾನವನ್ನು ಮೀರಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನೀವೆಲ್ಲ ಸಂವಿಧಾನ ಓದಿದವರು, ಕಾನೂನು ತಿಳಿದವರು. ಯಾವಾಗಲೂ ಕೋರ್ಟ್ ತೀರ್ಪನ್ನೇ ಪ್ರಾಸ್ತಾಪ ಮಾಡುವ ನೀವೇ ಮುಸಲ್ಮಾನರಿಗೆ ಕೋರ್ಟ್ ತೀರ್ಪನ್ನು ಮೀರಬೇಡಿ ಎಂದು ಹೇಳಬಹುದಾಗಿತ್ತು. ಆದರೆ ಅದನ್ನು ಯಾರೂ ಮಾಡಿಲ್ಲ. ಧ್ವನಿವರ್ಧಕಗಳಿಂದ ಆಸ್ಪತ್ರೆಯಲ್ಲಿ ಇರುವವರಿಗೆ, ವೃದ್ಧರಿಗೆ ತೊಂದರೆಯಾಗುತ್ತದೆ ಎಂದು ನೀವು ಹೇಳದೆ ಹೋದರೆ, ನೀವೆಲ್ಲಾ ಓಟ್ ಬ್ಯಾಂಕ್ ರಾಜಕಾರಣ ಮಾಡ್ತಾ ಇದ್ದೀರಿ ಅಂತಾ ಗೊತ್ತಾಗುತ್ತದೆ ಎಂದರು.
ಕಾಂಗ್ರೆಸ್ನವರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ದೇಶ ಹಾಗೂ ರಾಜ್ಯದಲ್ಲಿ ಅವರನ್ನು ಜನ ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿ ಇದೇ ರೀತಿ ನೀವು ಸಂವಿಧಾನ ಮೀರಿ ನಡೆದರೆ, ಕೋರ್ಟ್ಗೆ ಅಪಮಾನವಾಗುವ ರೀತಿ ನಡೆದುಕೊಂಡರೆ, ನಿಮಗೆ ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷದಲ್ಲಿ ಕೂರುವಷ್ಟು ಸ್ಥಾನವೂ ಸಿಗುವುದಿಲ್ಲ ಎಂದು ಕಿಡಿ ಕಾರಿದರು.