ಶಿವಮೊಗ್ಗ: ರಾಜ್ಯದಲ್ಲಿ ಗಲಭೆಗಳನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಾಗ ಜೆಡಿಎಸ್, ಕಾಂಗ್ರೆಸ್ನವರು ಇದು ಪೊಲೀಸರ ಸೃಷ್ಟಿ ಎಂದಿದ್ದರು. ಇದೀಗ ಮಂಗಳೂರಲ್ಲಿ ಸಜೀವ ಬಾಂಬ್ ಸಿಕ್ಕಿದೆ. ಕರ್ನಾಟಕದಲ್ಲಿ ಈ ರೀತಿ ದುಷ್ಕೃತ್ಯ ಎಸಗುವ ಸಂಘಟನೆಗಳ ವಿರುದ್ಧ ಎಲ್ಲರೂ ಒಟ್ಟಾಗಿ ಗಟ್ಟಿ ನಿಲುವು ತೆಗೆದುಕೊಳ್ಳಬೇಕಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಮಂಗಳೂರಲ್ಲಿ ಸಜೀವ ಬಾಂಬ್ ಪತ್ತೆ ಪ್ರಕರಣ: ಸಚಿವ ಈಶ್ವರಪ್ಪ ಹೇಳಿದ್ದೇನು? - ಮಂಗಳೂರಿನಲ್ಲಿ ಜೀವಂತ ಬಾಂಬ್ ಪತ್ತೆ ನ್ಯೂಸ್
ರಾಜ್ಯದಲ್ಲಿ ಗಲಭೆಗಳನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಾಗ ಜೆಡಿಎಸ್, ಕಾಂಗ್ರೆಸ್ನವರು ಇದು ಪೊಲೀಸರ ಸೃಷ್ಟಿ ಎಂದಿದ್ದರು. ಇದೀಗ ಮಂಗಳೂರಲ್ಲಿ ಸಜೀವ ಬಾಂಬ್ ಸಿಕ್ಕಿದೆ. ಕರ್ನಾಟಕದಲ್ಲಿ ಈ ರೀತಿ ದುಷ್ಕೃತ್ಯವೆಸಗುವ ಸಂಘಟನೆಗಳ ವಿರುದ್ಧ ಎಲ್ಲರೂ ಒಟ್ಟಾಗಿ ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳ ನಡೆಯಿಂದಾಗಿ ದುಷ್ಕೃತ್ಯ ಮಾಡುವವರಿಗೆ ಬೆಂಬಲ ಸಿಕ್ಕಂತಾಗುತ್ತದೆ. ಇಂತಹ ಕೆಲಸ ಮಾಡಲು ಅವರಿಗೆ ಇನ್ನಷ್ಟು ಧೈರ್ಯ ಬರುತ್ತದೆ. ಸಿಸಿ ಕ್ಯಾಮರಾದಲ್ಲಿ ಬಾಂಬ್ ಇಟ್ಟಿರುವುದು ಯಾರು ಅನ್ನೋದು ಗೊತ್ತಾಗಿದೆ. ಕರ್ನಾಟಕ ಶಾಂತಿಯುತವಾಗಿರಬೇಕು. ದುಷ್ಕೃತ್ಯಕ್ಕೆ ಮುಂದಾಗುವ ದುಷ್ಟರನ್ನ ಸದೆಬಡಿಯಲು ಕ್ರಮ ಕೈಗೊಳ್ಳೋಣ. ಅದನ್ನು ಬಿಟ್ಟು ಈ ವಿಷಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುವುದು ಸರಿಯಲ್ಲ. ರಾಜಕಾರಣ ಮಾಡಿದರೆ ಎಲ್ಲರಿಗೂ ತೊಂದರೆಯಾಗುತ್ತೆ ಎಂದರು.
ಮಂಗಳೂರಿನಲ್ಲಿ ಬಾಂಬ್ ಪತ್ತೆಯಾಗಿರುವ ಪ್ರಕರಣದಲ್ಲಿ ಭದ್ರತಾ ಲೋಪ ಕಾಣುವುದಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಈಗ ಬಾಂಬ್ ಅನ್ನು ಪೊಲೀಸರೇ ತಂದಿಟ್ಟಿದ್ದಾರೆ ಎಂದು ಹೇಳುತ್ತಾರೆಯೇ? ಎಂದು ಈಶ್ವರಪ್ಪ ಪ್ರಶ್ನಿಸಿದರು. ಪಿಎಫ್‌ಐ ಹಾಗೂ ಎಸ್ಡಿಪಿಐ ಸಂಘಟನೆ ನಿಷೇಧಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಭದ್ರತೆ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಮ್ಮೊಂದಿಗೆ ಕೈಜೋಡಿಸಬೇಕೆಂದು ಈಶ್ವರಪ್ಪ ಮನವಿ ಮಾಡಿದ್ರು.