ಶಿವಮೊಗ್ಗ: ಕೇಂದ್ರ ಬಜೆಟ್ ಕುರಿತು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಟೀಕೆಗೆ ಸಚಿವ ಈಶ್ವರಪ್ಪ ಗರಂ ಆಗಿದ್ದಾರೆ. ಬಿಜೆಪಿಯವರು ಈ ದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಸಚಿವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ರಸ್ತೆಯಲ್ಲಿ ವಜ್ರ ವೈಡೂರ್ಯ ಇಟ್ಟು ಮಾರಾಟ ಮಾಡುತ್ತಿದ್ರಾ ಎಂದು ಪ್ರಶ್ನಿಸಿದ್ದಾರೆ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಈ ಹಿಂದೆ ಮಾಡಿದ್ದ ಸಾಲವನ್ನು ಪ್ರಧಾನಿ ಮೋದಿ ತೀರಿಸಿದ್ದಾರೆ. ಅಲ್ಲದೇ ವಿವಿಧ 15 ದೇಶಗಳಿಗೆ ಮೋದಿಯವರು ಸಾಲ ಕೊಟ್ಟಿದ್ದಾರೆ. ರಾಷ್ಟ್ರವನ್ನು ಮಾರಾಟ ಮಾಡಿದ್ದರೇ, ಇದು ಆಗುತ್ತಿತ್ತಾ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸಾಲ ತಂದೇ ಇಲ್ವಾ? ಟೀಕೆ ಮಾಡಬೇಕು ಅಂತಾ ಟೀಕೆ ಮಾಡಲು ಯಾವ ಪದನಾದ್ರೂ ಬಳಸಬಹುದು. ಆದರೆ ತಾನು ಮುಖ್ಯಮಂತ್ರಿ ಆಗಿದ್ದೆ ಎನ್ನುವುದನ್ನು ನೆನಪಿಟ್ಟುಕೊಂಡು ಟೀಕೆ ಮಾಡೋದು ಒಳ್ಳೆಯದು ಎಂದು ತಿರಿಗೇಟು ನೀಡಿದರು.
ಒಂದೇ ಒಂದು ವರ್ಷದಲ್ಲಿ ದೇಶವನ್ನು ರಾಮರಾಜ್ಯ ಮಾಡಲು ಸಾಧ್ಯವಾಗಲ್ಲ. ಇರುವ ಆರ್ಥಿಕ ಪರಿಸ್ಥಿತಿ, ಕೋವಿಡ್ ಪರಿಸ್ಥಿತಿಯಲ್ಲಿ ಎಲ್ಲಾ ತಜ್ಞರು ಕೂಡಾ ಮೋದಿ ಅವರ ಬಜೆಟ್ ಅನ್ನು ಸ್ವಾಗತಿಸಿದ್ದಾರೆ ಎಂದು ಸಚಿವ ಈಶ್ವರಪ್ಪ ಕೇಂದ್ರ ಬಜೆಟ್ಅನ್ನು ಸಮರ್ಥಿಸಿಕೊಂಡರು.
'ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಗೊತ್ತಿಲ್ಲ':ಮುಖ್ಯಮಂತ್ರಿ ಅವರಿಂದ ಸಂಪುಟ ವಿಸ್ತರಣೆಯೇ ಇಲ್ಲವೇ ಪುನಾರಚನೆಯೇ ಎಂಬುದು ನನಗೆ ಗೊತ್ತಿಲ್ಲ. ಸಿಎಂ ದೆಹಲಿಗೆ ಹೋಗಿ ಬಂದ ಮೇಲೆ ಅವರೇ ನಿಮ್ಮ ಬಳಿ ಹೇಳುತ್ತಾರೆ. ನಾನು ಹಿರಿಯ ಸಚಿವ ಹೌದು. ಕೇಂದ್ರದ ನಾಯಕರ ಜೊತೆ ಸಂಪರ್ಕ ಇಟ್ಟುಕೊಂಡಿರುವುದು ಹೌದು. ಆದರೆ ಮುಖ್ಯಮಂತ್ರಿ ಅವರು ಅಲ್ಲಿಗೆ ಹೋದ ಸಂದರ್ಭದಲ್ಲಿ ಪ್ರಧಾನಮಂತ್ರಿ ಏನು ಹೇಳ್ತಾರೆ ಎಂಬುದನ್ನು ಸೀಕ್ರೆಟ್ ಆಗಿ ಇಟ್ಟಿರುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಬಜೆಟ್ ಬಗ್ಗೆ ಲೇವಡಿ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ತಿರುಗೇಟು ನೀಡಿದ ಈಶ್ವರಪ್ಪ, ರಾಜ್ಯಕ್ಕೆ ಏನೇನು ಬಂದಿದೆ ಎನ್ನುವ ಬಗ್ಗೆ ಪಟ್ಟಿಯನ್ನೇ ಕೊಡುತ್ತೇನೆ. 400 ವಂದೇ ಮಾತರಂ ರೈಲು ಬರುತ್ತಿವೆ. ಕರ್ನಾಟಕ ಬಿಟ್ಟು ಬೇರೆ ಕಡೆಯಿಂದ ಬರುತ್ತಾ ಎಂದು ಪ್ರಶ್ನಿಸಿದರು.
80 ಲಕ್ಷ ಮನೆಗಳು ನಿರ್ಮಾಣ ಆಗುತ್ತವೆ. ಇವು ಕರ್ನಾಟಕ ಬಿಟ್ಟು ನಿರ್ಮಾಣವಾಗುತ್ತವಾ? 10 ಸಾವಿರ ಕೋಟಿ ರೂಪಾಯಿಯನ್ನು ಮೂಲಭೂತ ಸೌಕರ್ಯಕ್ಕೆ ಕೊಡುತ್ತಿದ್ದಾರೆ. ಕರ್ನಾಟಕ ಬಿಟ್ಟು ಈ ಹಣ ಬರುತ್ತದಾ? ಎಲ್ಲವನ್ನೂ ಕಾಂಗ್ರೆಸ್ ಟೀಕೆ ಮಾಡಿದರೆ ನಾವು ಏನು ಮಾಡಕಾಗಲ್ಲ. ನರೇಗಾ ಯೋಜನೆ ಇವರ ಸರ್ಕಾರದಲ್ಲಿ ಎಷ್ಟು ಮಾಡಿದ್ರು. ನಮ್ಮ ಸರ್ಕಾರ ಬಂದ ಮೇಲೆ ಏಕೆ ಜಾಸ್ತಿ ಆಯ್ತು? ಇದೆಲ್ಲವೂ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಸಿಕ್ಕಿರುವುದು. ಯಾವುದೂ ಯಾವುದೋ ರಾಜ್ಯಕ್ಕೆ ಸಿಕ್ಕಾಪಟ್ಟೆ ಕೊಟ್ಟಿದ್ದಾರಾ..? ಈ ಬಜೆಟ್ ನಲ್ಲಿ ಯಾವುದೇ ರಾಜಕಾರಣ ಮಾಡಲು ಹೋಗಿಲ್ಲ ಎಂದರು.
ದೇಶಕ್ಕೆ ಒಳ್ಳೆಯದಾಗಲಿ ಅಂತಾ ವಿಶೇಷ ಬಜೆಟ್ ತಂದಿದ್ದಾರೆ. ಇದನ್ನು ಕಾಂಗ್ರೆಸ್ ಸ್ವಾಗತ ಮಾಡಬೇಕಿತ್ತು. ಆದರೆ ವಿರೋಧ ಮಾಡ್ತಿದ್ದಾರೆ. ಕಾಂಗ್ರೆಸ್ ನವರು ವಿರೋಧ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ನದಿ ಜೋಡಣೆ ಯೋಜನೆ ಯೋಜನೆ ಉತ್ತಮವಾಗಿದೆ. ಹಾಗಾಗಿ ಅರಣ್ಯ ನಾಶ ಆಗುತ್ತೆ ಅನ್ನುವ ಕಾರಣಕ್ಕೆ ವಿರೋಧಿಸುವುದು ಬೇಡ ಎಂದು ಸಚಿವ ಈಶ್ವರಪ್ಪ ಮನವಿ ಮಾಡಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ