ಶಿವಮೊಗ್ಗ: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣಾಭಿವೃದ್ಧಿ ವಿಚಾರವಾಗಿ ವಿಶ್ವಕ್ಕೆ ಮಾದರಿ ಯೋಜನೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದರು.
ಹೊಳಲೂರು ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ನರೇಗಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನರೇಗಾ ಯೋಜನೆ ಕೇವಲ ಕೂಲಿಗಾಗಿ ಕೆಲಸ ಮಾಡುವ ಯೋಜನೆ ಅಲ್ಲ.
ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಸೃಜಿಸುವುದರೊಂದಿಗೆ, ವೈಯಕ್ತಿಕ ಸೌಲಭ್ಯಗಳನ್ನು ಸಹ ಪಡೆಯುವ ಯೋಜನೆ ಇದಾಗಿದೆ. ಯೋಜನೆಯಡಿ ರಾಜ್ಯದಲ್ಲಿ ಗ್ರಾಮಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, 600ಕ್ಕೂ ಹೆಚ್ಚು ಹಳೇ ಕಲ್ಯಾಣಿಗಳಿಗೆ ಪುನರ್ಜನ್ಮ ನೀಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ನರೇಗಾ ದಿನಾಚರಣೆ - ಸಚಿವ ಈಶ್ವರಪ್ಪ ಮಾತನಾಡಿರುವುದು ಕಳೆದ ಎರಡು ವರ್ಷಗಳಲ್ಲಿ ಪ್ರತಿ ಗ್ರಾಮದಲ್ಲಿ ಕನಿಷ್ಟ ಒಂದು ಕೆರೆ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದ್ದು, ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿರುವುದನ್ನು ಕಂಡುಕೊಳ್ಳಲಾಗಿದೆ. ಇದರಿಂದಾಗಿ ಜಲಧಾರೆ ಯೋಜನೆಯಡಿ ನಮ್ಮ ರಾಜ್ಯ ದೇಶಕ್ಕೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದರು.
ಇದನ್ನೂ ಓದಿ:88 ಯೋಜನೆಗಳಿಗೆ ಅನುಮೋದನೆ ನೀಡಿದ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ, ರಾಜ್ಯದಲ್ಲಿ ಒಟ್ಟು 10,904 ಉದ್ಯೋಗ ಸೃಷ್ಟಿ : ಸಚಿವ ನಿರಾಣಿ
ನರೇಗಾ ಯೋಜನೆಯಡಿ ಸಣ್ಣ ರೈತರು ತಮ್ಮ ಕೃಷಿ ಚಟುವಟಿಕೆ ಸಾಮರ್ಥ್ಯವನ್ನು ಹೆಚ್ಚಿಸಿ, ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗಿದೆ. ಕೆರೆ, ಬದು, ಇಂಗುಗುಂಡಿಗಳ ನಿರ್ಮಾಣ, ತಡೆಗೋಡೆ ನಿರ್ಮಾಣ, ಹೊಲಕ್ಕೆ ಹೋಗಲು ಸಣ್ಣ ರಸ್ತೆಗಳ ನಿರ್ಮಾಣ, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಸಿಗಳನ್ನು ನೆಡುವ ಯೋಜನೆ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ, ದನದ ಕೊಟ್ಟಿಗೆ, ಕುರಿ ಶೆಡ್ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ತ್ಯಾವರೆಕೊಪ್ಪ ಸಿಂಹಧಾಮ ಅಭಿವೃದ್ಧಿ:ನರೇಗಾ ಯೋಜನೆಯಡಿ ತ್ಯಾವರೆಕೊಪ್ಪ ಸಿಂಹಧಾಮದಲ್ಲಿರುವ ಕೆರೆಗಳ ಅಭಿವೃದ್ಧಿ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲು ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಸರ್ಕಾರದಿಂದ ಅನುಮತಿಯನ್ನು ಪಡೆದು ಈ ಕಾಮಗಾರಿಗಳ ಅನುಷ್ಟಾನ ಕಾರ್ಯವನ್ನು ಆದಷ್ಟು ಬೇಗನೆ ಕೈಗೊಳ್ಳಲಾಗುವುದು ಎಂದರು.
ಗುರಿ ತಲುಪಿ ಸಾಧನೆ :ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ನೀಡಿದ್ದ 13 ಕೋಟಿ ಮಾನವ ದಿನಗಳ ಗುರಿ ನವೆಂಬರ್ ತಿಂಗಳಲ್ಲಿ ಪೂರ್ಣಗೊಂಡ ಕಾರಣ ಹೆಚ್ಚುವರಿಯಾಗಿ 1.40ಕೋಟಿ ಮಾನವ ದಿನದ ಗುರಿಯನ್ನು ರಾಜ್ಯಕ್ಕೆ ನೀಡಿತ್ತು. ಅದನ್ನು ಸಹ ಪೂರ್ಣಗೊಳಿಸಿ, ಇನ್ನೂ ಹೆಚ್ಚುವರಿ ದಿನಕ್ಕೆ ಅವಕಾಶ ನೀಡಲು ಕೇಂದ್ರಕ್ಕೆ ಕೋರಲಾಗಿದೆ ಎಂದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ