ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರು ದೋಸ್ತ್ಗೆ ದೋಸ್ತ್, ದುಷ್ಮನ್ಗೆ ಪಕ್ಕಾ ದುಷ್ಮನ್ ಆಗಿದ್ದು, ದೇಶವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅಧಿಕಾರವಧಿಯ ಮೊದಲ ವರ್ಷ ಪೂರೈಸಿದ್ದಕ್ಕೆ ಬಹುಪರಾಕ್ ಹಾಕಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿನಂದಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿರವರು ದೇಶದ ಭದ್ರತೆ ಹಾಗೂ ಪ್ರಗತಿಯ ವಿಚಾರದಲ್ಲಿ ವಜ್ರದಷ್ಟೇ ಕಠೋರವಾಗಿದ್ದಾರೆ. ಅದೇ ರೀತಿ ದೇಶದ ಪ್ರಜೆಗಳ ವಿಚಾರದಲ್ಲಿ ಹೂವಿನಷ್ಟೇ ಮೃದುವಾಗಿದ್ದಾರೆ. ಮೋದಿ ನೇತೃತ್ವದ 2.0 ಕೇಂದ್ರ ಸರ್ಕಾರಕ್ಕೆ ಒಂದು ವರ್ಷ ಅಂದ್ರೆ ಅದು ಸಾಧನೆಯ ವರ್ಷವಾಗಿದೆ. ಕೇಂದ್ರ ಸರ್ಕಾರ ಇದುವರೆಗೆ ರಾಜ್ಯಕ್ಕೆ 17,249 ಕೋಟಿ ರೂ. ಅನುದಾನ ನೀಡಿದೆ. ವಿವಿಧ ಪ್ರಾಯೋಜಿತ ಕಾರ್ಯಕ್ರಮಗಳಿಗೆ 10,079 ಕೋಟಿ ರೂ. ನೀಡಿದೆ. ಕಳೆದ ವರ್ಷ ಬಂದ ಪ್ರವಾಹಕ್ಕೆ 1,869 ಕೋಟಿ ರೂ. ಬಿಡುಗಡೆ ಮಾಡಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ 49,12,449 ರೈತರಿಗೆ ಹಣ ನೀಡಿದೆ. ರಾಜ್ಯದ ಶಿವಮೊಗ್ಗ ಹಾಗೂ ಕಲಬುರಗಿ ವಿಮಾನ ನಿಲ್ದಾಣಕ್ಕೆ ಹಣ ನೀಡಿದೆ ಎಂದರು.