ಶಿವಮೊಗ್ಗ:ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕು. ಮಾನವೀಯತೆ ಎನ್ನುವುದು ಹೃದಯದಿಂದ ಬರಬೇಕು. ಜಾತ್ರೆ ಎಂದರೆ ಎಲ್ಲರೂ ಒಟ್ಟಾಗುವ ಒಂದು ಸಂದರ್ಭ ಎಂದು ಅವಧೂತ ವಿನಯ್ ಗುರೂಜಿ ಹೇಳಿದರು. ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್ ಪ್ರೈವೇಟ್ ಲಿಮಿಟೆಟ್ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಸೂಕ್ತ ಹವನ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಚಿವ ಈಶ್ವರಪ್ಪನವರ ಕುಟುಂಬ ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಮಾತೆಯರಿಗೆ ಬಾಗಿನ ಮತ್ತು ಸೀರೆಯನ್ನು ಅರ್ಪಿಸಿ ವಿಶೇಷವಾಗಿ ಭಾರತೀಯ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಸಾಮೂಹಿಕ ವಿವಾಹ, ನೇತ್ರದಾನ ಶಿಬಿರ ಮತ್ತು ಮೆಡಿಕಲ್ ಕ್ಯಾಂಪ್ ಗಳನ್ನು ಹಮ್ಮಿಕೊಳ್ಳಲಿ ಎಂಬುದು ನನ್ನ ಆಶಯ. ಜಾತ್ರೆಯಿಂದಲೇ ಭಾರತೀಯ ಸಂಸ್ಕೃತಿ ಉಳಿದಿದೆ. ಹಿಂದೂ ಎಂದರೆ ಒಂದು ಎಂಬ ಅರ್ಥವಿದೆ. ಶಿವಮೊಗ್ಗದಲ್ಲಿ ಎಲ್ಲರೂ ಸಹಿಷ್ಣುತೆಯಿಂದ ಇರಬೇಕು. ಯಾವುದೇ ಗಲಾಟೆ ಆಗಬಾರದು. ಎಲ್ಲರೂ ಒಗ್ಗಟ್ಟಾಗಿರಬೇಕು ಎನ್ನುವ ಸಂದೇಶ ಈ ಮಾರಿಕಾಂಬ ಜಾತ್ರೆ ಸಂದರ್ಭದಲ್ಲಿ ಆಗಿದೆ. ಇದಕ್ಕಾಗಿಯೇ ಸುಖ, ಸೌಭಾಗ್ಯ ನೆಮ್ಮದಿ ನೀಡುವ ಶ್ರೀ ಸೂಕ್ತ ಹವನ ಹಮ್ಮಿಕೊಳ್ಳಲಾಗಿದೆ ಎಂದರು.