ಶಿವಮೊಗ್ಗ: ಸ್ನೇಹಿತ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿ, ಆಕೆಯ ಪತಿಯನ್ನೇ ಕೊಂದ ಆರೋಪಿಗೆ ಭದ್ರಾವತಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಮನ್ಸೂರ್ ಅಲಿಖಾನ್ ಎಂಬಾತ ಶಿಕ್ಷೆಗೆ ಗುರಿಯಾದ ಆರೋಪಿ. ಈತ 2019 ರ ಜುಲೈನಲ್ಲಿ ಅಸ್ಸೋಂ ಮೂಲದ ನಬೀಕುಲ್ ಇಸ್ಲಾಂ (21) ಎಂಬಾತನ ಕೊಲೆ ಮಾಡಿದ್ದ. ಮನ್ಸೂರ್ ಅಲಿಖಾನ್ ಮತ್ತು ನಬೀಕುಲ್ ಇಸ್ಲಾಂ ಭದ್ರಾವತಿಯ ಗೌಡ್ರಳ್ಳಿಯಲ್ಲಿ ಅಕ್ಕ- ಪಕ್ಕದ ಮನೆಯಲ್ಲಿ ವಾಸವಾಗಿದ್ದರು.
ನಬೀಕುಲ್ಲಾ ವಾಸವಿದ್ದ ಮನೆಯ ಹಂಚನ್ನು ತೆಗೆದು ಮನೆಗೆ ನುಗ್ಗಿದ ಮನ್ಸೂರ್ ಅಲಿಖಾನ್, ನಬೀಕುಲ್ ಪತ್ನಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನು ತಡೆಯಲು ಮುಂದಾದಾಗ ನಬೀಕುಲ್ಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಭದ್ರಾವತಿ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪ್ರಕರಣದ ವಾದ ಆಲಿಸಿದ ನ್ಯಾಯಾಧೀಶರಾದ ಆರ್.ವೈ.ಶಶಿಧರ್ ಅವರು ಆರೋಪಿಗೆ ಕಲಂ 302 ರ ಐಪಿಸಿ ಕಾಯ್ದೆಯಂತೆ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿದ್ದಾರೆ.
ಈ ದಂಡ ಕಟ್ಟಲು ವಿಫಲವಾದರೆ ಮೂರು ವರ್ಷಗಳ ಕಾಲ ಶಿಕ್ಷೆ ಅನುಭವಿಸಬೇಕು ಹಾಗೂ ಕಲಂ 450 ರ ಐಪಿಸಿ ಅಡಿಯಲ್ಲಿ ಆರೋಪ ಸಾಬೀತಾದ ಕಾರಣ ಮೂರು ವರ್ಷ ಕಠಿಣ ಶಿಕ್ಷೆಯ ಕಾರಾಗೃಹವಾಸ ಹಾಗೂ 10 ಸಾವಿರ ರೂ. ದಂಡವನ್ನು ಕಟ್ಟಬೇಕು. ಒಂದು ವೇಳೆ ಕಟ್ಟಲು ವಿಫಲರಾದರೆ ಮತ್ತೆ 2 ತಿಂಗಳು ಕಾಲ ಸಾದಾ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.