ಕರ್ನಾಟಕ

karnataka

ETV Bharat / city

'ಎಲ್ಲಿವರೆಗೆ ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಯುತ್ತೋ, ಅಲ್ಲಿವರೆಗೂ ಅವರು ರಾಜಕಾರಣ ಮಾಡ್ತಾರೆ' - ಮೇಕೆದಾಟು ಯೋಜನೆ ಕುರಿತು ಈಶ್ವರಪ್ಪ ಹೇಳಿಕೆ

ತಮಿಳುನಾಡಿನವರಿಗೆ ಎಲ್ಲಿಯತನಕ ಆಕಾಶದಿಂದ ನೀರು ಬರುತ್ತೋ, ಎಲ್ಲಿಯವರೆಗೆ ರಾಜ್ಯದಿಂದ ನೀರು ಹರಿಯುತ್ತೋ ಅಲ್ಲಿಯತನಕ ರಾಜಕಾರಣ ಮಾಡೋದೇ ಅವರ ಉದ್ಯೋಗ. ಇದು ಇವತ್ತು ನಿನ್ನೆಯದಲ್ಲ, ಮುಂಚೆಯಿಂದನೂ ಇದೆ ಎಂದು ಸಚಿವ ಕೆ.ಎಸ್​.ಈಶ್ವರಪ್ಪ ಕಿಡಿಕಾರಿದರು.

ks Ishwarappa
ಈಶ್ವರಪ್ಪ

By

Published : Jul 5, 2021, 7:34 PM IST

ಶಿವಮೊಗ್ಗ: ತಮಿಳುನಾಡಿಗೆ ರಾಜ್ಯದಿಂದ ನೀರು ಹರಿಯುವರೆಗೂ ಅವರು ರಾಜಕಾರಣವನ್ನೇ ಮಾಡ್ತಾರೆ. ಇದು ಇಂದು, ನಿನ್ನೆಯದಲ್ಲ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​ ಪತ್ರಕ್ಕೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದರು.

ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್​ ಪತ್ರಕ್ಕೆ ಸಚಿವ ಈಶ್ವರಪ್ಪ ತಿರುಗೇಟು

ಮೇಕೆದಾಟು ಯೋಜನೆ ಕಾಮಗಾರಿ ಸ್ಥಗಿತಗೊಳಿಸುವಂತೆ ಬಿ.ಎಸ್​.ಯಡಿಯೂರಪ್ಪನವರಿಗೆ ತಮಿಳುನಾಡು ಸಿಎಂ ಪತ್ರಬರೆದಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನಮ್ಮಿಂದ ನೀರು ತೆಗೆದುಕೊಳ್ಳುವ ತಮಿಳಿಗರು‌ ನ್ಯಾಯವಾಗಿ ನಮ್ಮ ಋಣ ತೀರಿಸಬೇಕು. ನಮಗೂ ಕೋರ್ಟ್, ಕಚೇರಿ, ಸಂವಿಧಾನದ ಮೇಲೆ ಗೌರವವಿದೆ. ಅದೇ ಕಾರಣಕ್ಕೆ ಕೋರ್ಟ್ ತೀರ್ಮಾನ ಹಾಗೂ ಸಂವಿಧಾನದಂತೆ ನಡೆದುಕೊಳ್ಳುತ್ತಿದ್ದೇವೆ. ಅದೇ ರೀತಿ ತಮಿಳುನಾಡಿನವರು ನ್ಯಾಯ, ತೀರ್ಮಾನಗಳಿಗೆ ಬದ್ಧರಾಗಬೇಕು ಎಂದರು.

ಮೇಕೆದಾಟು ಯೋಜನೆ ನಾವಾಗಿಯೇ ಪ್ರಾರಂಭ ಮಾಡಿದ್ದಲ್ಲ. ಸುಪ್ರೀಂಕೋರ್ಟ್ ಮೂಲಕ ರಿಪೋರ್ಟ್ ಬಂದ ಮೇಲೆ ಯೋಜನೆಗೆ ಮುಂದಾಗಿದ್ದೇವೆ ಎಂದು ಸ್ಟಾಲಿನ್​ ಪತ್ರಕ್ಕೆ ಪ್ರತ್ಯುತ್ತರ ನೀಡಿದರು.

ಕಾಂಗ್ರೆಸ್​ನಲ್ಲಿಯೂ ಪಂಚ ಕೌರವರಿದ್ದಾರೆ

ಭದ್ರಾವತಿ ತಾಲೂಕಿನ ಭದ್ರಾ ಜಲಾಶಯ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಮಹಾಭಾರತ ಎಂದ ಕೂಡಲೇ ಪಂಚ ಪಾಂಡವರು ನೆನಪಿಗೆ ಬರುತ್ತಾರೆ. ಆದ್ರೆ, ಕಾಂಗ್ರೆಸ್​​ ಪಕ್ಷದಲ್ಲಿ ಪಂಚ ಕೌರವರು ಕಾಣ ಸಿಗುತ್ತಿದ್ದಾರೆ. ಅವರು ಅಧಿಕಾರ ಹಿಡಿಯಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಐದು ಜಾತಿಗೆ ಒಬ್ಬೊಬ್ಬರು ಮುಖ್ಯಮಂತ್ರಿ ರೇಸ್​ನಲ್ಲಿದ್ದಾರೆ. ಕುರುಬ ಸಿದ್ದರಾಮಯ್ಯ, ಒಕ್ಕಲಿಗರ ಡಿ.ಕೆ. ಶಿವಕುಮಾರ್, ಲಿಂಗಾಯಿತ ಎಂ.ಬಿ.ಪಾಟೀಲ್, ದಲಿತ ಪರಮೇಶ್ವರ್, ಮುಸ್ಲಿಂ ಸಮುದಾಯದ ತನ್ವಿರ್ ಸೇಠ್.. ಹೀಗೆ ಜಾತಿಗೊಬ್ಬರು ಸಿಎಂ ಸ್ಥಾನಕ್ಕಾಗಿ ಪೈಪೋಟಿಗೆ ಇಳಿದಿದ್ದಾರೆ ಎಂದು ವ್ಯಂಗ್ಯವಾಡಿದರು.

ಇವರಿಗೆ ಮಾನ ಮರ್ಯಾದೆ ಇದ್ದಿದ್ದರೆ, ಜನರಿಂದ ತಿರಸ್ಕಾರಗೊಂಡ ಬಳಿಕ ಸುಮ್ಮನಿರಬೇಕಿತ್ತು. ಧರ್ಮವನ್ನು ಹಾಳು ಮಾಡುವ ಕಾಂಗ್ರೆಸ್ ಪಕ್ಷವನ್ನು ಜನರೇ ತಿರಸ್ಕಾರ ಮಾಡಿ ಹೊರಗಟ್ಟಿದ್ದಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗಲೇ, ತಾವು ಮುಖ್ಯಮಂತ್ರಿ ಎಂದು ಇವರು ಬಡಿದಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ದೇಶದ ಜನ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಮೆಚ್ಚಿದ್ದಾರೆ. ರಾಜ್ಯದಲ್ಲಿ ಧರ್ಮದ ಪರ ಇರುವ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 24 ಸ್ಥಾನ ಗೆದ್ದು ವಿಪಕ್ಷ ಸ್ಥಾನಕ್ಕೆ ಬರಲಿ. ಅದು ಕೂಡ ಆಗೋಲ್ಲ. ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುವುದಾಗಿ ಏನು ಅರ್ಜಿ ಹಾಕಿದ್ದಾರಾ‌? ಅವರು ಕಾಂಗ್ರೆಸ್ ಪಕ್ಷವನ್ನು ಮೂಸಿಯೂ ನೋಡೋಲ್ಲ. ಸಿದ್ದರಾಮಯ್ಯ ಪ್ರಳಯ ಆದ್ರೂ ಯಾರನ್ನೂ ಸೇರಿಸಿಕೊಳ್ಳಲ್ಲ ಅಂತಾರೆ. ಆದ್ರೆ ಡಿಕೆಶಿ ಯಾರೂ ಬೇಕಾದರೂ ಬರಲಿ ಅಂತಾರೆ. ಎಲ್ಲಾ ಇವರ ಊಹಾಪೋಹ ಎಂದ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ABOUT THE AUTHOR

...view details