ಶಿವಮೊಗ್ಗ :ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಮಾಡಿದ್ದನ್ನು ಖಂಡಿಸಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸಮಿತಿ ಸದಸ್ಯರು ಪ್ರತಿಭಟಿಸಿದ ಘಟನೆ ಶಿಕಾರಿಪುರದಲ್ಲಿ ನಡೆದಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಖಂಡಿಸಿ ಪ್ರತಿಭಟನೆ.. ಶಿಕಾರಿಪುರದ ಎಸ್ ಎಸ್ ರಸ್ತೆಯಲ್ಲಿ ಆಗಸ್ಟ್ 19ರಂದು ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣಗೊಳ್ಳಬೇಕಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಮೆ ಸ್ಥಾಪಿಸಲು ಸಮಿತಿಯವರು ತಯಾರಿ ನಡೆಸುತ್ತಿದ್ದರು. ಆದರೆ, ನಿನ್ನೆ ರಾತ್ರಿ ತಾಲೂಕು ಆಡಳಿತ ಪೊಲೀಸರ ಸಹಾಯದಿಂದ ರಾಯಣ್ಣನ ಪ್ರತಿಮೆ ತೆರವುಗೊಳಿಸಿದ್ದಾರೆ. ಇದು ಸಮಿತಿಯ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡಿದ್ದು, ಈಗ ಏಕಾಏಕಿ ತೆರವು ಮಾಡಿರುವುದು ಖಂಡನೀಯ. ಪ್ರತಿಮೆಯನ್ನು ಪುನಃ ತಂದು ಅಧಿಕಾರಿಗಳು ಪ್ರತಿಷ್ಠಾಪಿಸಬೇಕು ಹಾಗೂ ಪ್ರತಿಮೆ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸಂಸದರ ವಿರುದ್ಧ ಆಕ್ರೋಶ :ಪ್ರತಿಮೆ ತೆರವಿಗೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಕಾರಣ. ಸಂಸದರ ಆದೇಶದ ಮೇರೆಗೆ ಪ್ರತಿಮೆ ತೆರವು ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯದ ಮಾಹಿತಿಯ ಪ್ರಕಾರ ಪ್ರತಿಮೆಯನ್ನು ಶಿವಮೊಗ್ಗಕ್ಕೆ ತರಲಾಗಿದೆ ಎನ್ನಲಾಗುತ್ತಿದೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.