ಶಿವಮೊಗ್ಗ:ಸೋಮಿನಕೊಪ್ಪ ಗ್ರಾಮದಸರ್ವೇ ನಂಬರ್ 47ರ ಕೆರೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದವರು ಅವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದನ್ನು ಕೂಡಲೇ ಕೈಬಿಡಬೇಕೆಂದು ಅಣ್ಣಾ ಹಜಾರೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಯಾದವ್ ಆಗ್ರಹಿಸಿದ್ದಾರೆ.
ಅವೈಜ್ಞಾನಿಕ ಕೆರೆ ಅಭಿವೃದ್ಧಿ ಯೋಜನೆ ಕೈಬಿಡಿ: ಅಶೋಕ್ ಯಾದವ್ ಆಗ್ರಹ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ವೇ ನಂಬರ್ 47ರಲ್ಲಿ ಕೆರೆ ಸುಮಾರು 110 ಎಕರೆ ವಿಸ್ತೀರ್ಣದಲ್ಲಿದೆ. ಆದರೆ ಒತ್ತುವರಿಯಾಗಿ ಕೇವಲ 106 ಎಕರೆ ಜಾಗ ಉಳಿದಿದೆ ಎಂದು ಹೇಳಲಾಗ್ತಿದೆ. ಈ ಕೆರೆಯನ್ನು ಈಗ ಅವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವ ಹುನ್ನಾರ ಕೂಡ ನಡೆಯುತ್ತಿದೆ ಎಂದು ಆರೋಪಿಸಿದರು.
ಸುಮಾರು 5.77 ಕೋಟಿ ರೂಗಳ ವೆಚ್ಚದಲ್ಲಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ವಾಕಿಂಗ್ ಪಾಥ್ಗಾಗಿಯೇ ಎರಡು ಕೋಟಿ ರೂ ಖರ್ಚು ಮಾಡಲಾಗ್ತಿದೆ. 36 ಲಕ್ಷ ರೂಗಳ ವೆಚ್ಚದಲ್ಲಿ ಪ್ಲೇಗ್ರೌಂಡ್ ನಿರ್ಮಾಣವಾಗುತ್ತಿದೆ. ಸ್ಟೋರೇಜ್ ರೂಮ್ಗಾಗಿ 2.75 ಲಕ್ಷ ಖರ್ಚು ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಇದೊಂದು ದುಡ್ಡು ಹೊಡೆಯುವ ಯೋಜನೆಯಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಹಲವಾರು ಬಾರಿ ದೂರು ನೀಡಿ, ಮನವಿ ಮಾಡಿದ್ರೂ ಕೂಡ ಏನೂ ಪ್ರಯೋಜನವಾಗ್ತಿಲ್ಲ. ಆದ್ದರಿಂದ ಈ ಯೋಜನೆ ಕೈಬಿಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.