ಕರ್ನಾಟಕ

karnataka

ETV Bharat / city

ಶಿವಮೊಗ್ಗದಲ್ಲಿ ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ

ಮಹಿಳೆಯೋರ್ವರು ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ ಮತ್ತು ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ.

Mother suicide with children
ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

By

Published : May 17, 2022, 9:03 AM IST

Updated : May 17, 2022, 9:12 AM IST

ಶಿವಮೊಗ್ಗ: ಮಹಿಳೆ ತನ್ನಿಬ್ಬರು ಕಂದಮ್ಮಗಳಿಗೆ ನೇಣು ಬಿಗಿದು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಚೊರಡಿ ಗ್ರಾಮದಲ್ಲಿ ನಡೆದಿದೆ. ವರದಕ್ಷಿಣೆ ಕಿರುಕುಳ ತಾಳಲಾರದ ಮಹಿಳೆ ತನ್ನ ತವರಿಗೆ ತೆರಳಿದ್ದರು. ಗಂಡನ ಮನೆಯವರ ಒತ್ತಾಯದ ಮೇರೆಗೆ ಗಂಡನ ಮನೆಗೆ ವಾಪಸ್ಸಾದ ಒಂದೇ ವಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


ದಾವಣಗೆರೆ ಜಿಲ್ಲೆಯ ಸಾಸ್ವೆಹಳ್ಳಿ ಗ್ರಾಮದ ತಿಪ್ಪೆರುದ್ರಸ್ವಾಮಿ ಎಂಬುವವರ ಮಗಳು ಜ್ಯೋತಿಯನ್ನು ಶಿವಮೊಗ್ಗದ ಚೊರಡಿ ಗ್ರಾಮದ ಶಿವಮೂರ್ತಿ ಎಂಬುವವರಿಗೆ 2018ರಲ್ಲಿ ವರದಕ್ಷಿಣೆಯನ್ನೂ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆ ವೇಳೆ ಶಿವಮೂರ್ತಿ ತಾನು ಅರಣ್ಯ ಇಲಾಖೆ ನೌಕರನೆಂದು ಹೇಳಿಕೊಂಡು ಹೆಚ್ಚಿನ ವರದಕ್ಷಿಣೆ ಪಡೆದಿದ್ದ. ಬಳಿಕ ಶಿವಮೂರ್ತಿ ಅರಣ್ಯ ಇಲಾಖೆಯ ದಿನಗೂಲಿ ನೌಕರ ಎಂಬುದು ಜ್ಯೋತಿ ಮನೆಯವರಿಗೆ ತಿಳಿಯಿತು.

ಅಂದಿನಿಂದ ಶಿವಮೂರ್ತಿ ಹಾಗೂ ಆತನ ಕುಟುಂಬದವರು ಜ್ಯೋತಿಗೆ ಪದೇ ಪದೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಲಾರಂಭಿಸಿದ್ದರು. ಇದರಿಂದ ಮನನೊಂದ ಜ್ಯೋತಿ ಮಕ್ಕಳೊಂದಿಗೆ ತವರಿಗೆ ತೆರಳಿದ್ದರು. ಆದರೆ ವಾರದ ಹಿಂದೆ ಜ್ಯೋತಿಯನ್ನು ಅಲ್ಲಿಂದ ಒತ್ತಾಯಪೂರ್ವಕವಾಗಿ ಕರೆತಂದಿದ್ದು ಇದೀಗ ದುರ್ಘಟನೆ ನಡೆದಿದೆ. ಅಲ್ಲದೇ, ಜ್ಯೋತಿ ಕುಟುಂಬದವರು ತಮ್ಮ ಮಗಳ ಬಳಿ 50 ಸಾವಿರ ರೂ ಹಣ ನೀಡಿ ಪತಿ ಮನೆಗೆ ಕಳುಹಿಸಿದ್ದರು. ಈ ಮೊದಲೂ ಸಹ ಹಣ ನೀಡಿದ್ದರೆಂದು ತಿಳಿದುಬಂದಿದೆ.

ಇದನ್ನೂ ಓದಿ:ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಮೂವರು ಸಹೋದರಿಯರು ಸಾವು

ಮಗಳನ್ನು ಪತಿ ಮನೆಗೆ ಕಳುಹಿಸಿ ಒಂದೇ ವಾರದಲ್ಲಿ ಜ್ಯೋತಿ ಹಾಗೂ ಆಕೆಯ ಇಬ್ಬರು ಮಕ್ಕಳಾದ 2 ವರ್ಷದ ಸಾನ್ವಿ ಹಾಗೂ 11 ತಿಂಗಳಿನ ಕುಶಾಲ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಕ್ಕೆ ಜ್ಯೋತಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೂವರನ್ನು ಕೊಲೆ ಮಾಡಿ ಬಳಿಕ ನೇಣು ಹಾಕಿದ್ದಾರೆ ಎಂದು ಜ್ಯೋತಿ ಕುಟುಂಬದವರು ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪತಿ ಶಿವಮೂರ್ತಿ ಹಾಗೂ ಕುಟುಂಬದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Last Updated : May 17, 2022, 9:12 AM IST

ABOUT THE AUTHOR

...view details