ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 30ನೇ ವಾರ್ಷಿಕ ಘಟಿಕೋತ್ಸವ ಜುಲೈ 29ರಂದು ಆನ್ಲೈನ್ ಮೂಲಕ ನಡೆಯಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ ತಿಳಿಸಿದ್ದಾರೆ.
ಜುಲೈ 29ರಂದು ಕುವೆಂಪು ವಿವಿಯ 30ನೇ ಘಟಿಕೋತ್ಸವ: ಕುಲಪತಿ - ಕುಲಪತಿ ಡಾ.ಬಿ.ಪಿ.ವೀರಭದ್ರಪ್ಪ
ಕೊರೊನಾ ಹಿನ್ನೆಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ 30ನೇ ವಾರ್ಷಿಕ ಘಟಿಕೋತ್ಸವ ಜುಲೈ 29ರಂದು ಆನ್ಲೈನ್ ಮೂಲಕ ನಡೆಯಲಿದೆ. ಕಾರ್ಯಕ್ರಮದಲ್ಲಿ ಸೀಮಿತ ಗಣ್ಯರು ಹಾಗೂ ವಿದ್ಯಾರ್ಥಿಗಳು ಮಾತ್ರ ಭಾಗಿಯಾಗಲಿದ್ದಾರೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವೆಬಿನಾರ್ ಮೂಲಕ ಘಟಿಕೋತ್ಸವ ನಡೆಯಲಿದ್ದು, ಸೀಮಿತ ಗಣ್ಯರು ಹಾಗೂ ವಿದ್ಯಾರ್ಥಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಅವರ ಉಪಸ್ಥಿತಿಯಲ್ಲಿ ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ವಿ.ಕೃಷ್ಣ ಭಟ್ ಘಟಿಕೋತ್ಸವದಲ್ಲಿ ಭಾಷಣ ಮಾಡಲಿದ್ದಾರೆ.
ಈ ಬಾರಿಯ ಘಟಿಕೋತ್ಸವದಲ್ಲಿ 119 ಸ್ವರ್ಣ ಪದಕಗಳಿದ್ದು, 67 ವಿದ್ಯಾರ್ಥಿಗಳು ಅದನ್ನು ಪಡೆದುಕೊಂಡಿದ್ದಾರೆ. ಎಂಎ ಕನ್ನಡ ವಿಭಾಗದ ರಂಗನಾಥ್ ಹೆಚ್.ಎಂ. ಅತೀ ಹೆಚ್ಚು 10 ಸ್ವರ್ಣ ಪದಕ ಹಾಗೂ 3 ನಗದು ಬಹುಮಾನಗಳನ್ನು ಪಡೆದಿದ್ದಾರೆ. 194 ವಿದ್ಯಾರ್ಥಿಗಳು ಪಿಹೆಚ್ಡಿ ಪದವಿ ಹಾಗೂ 23,732 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ ಎಂದು ತಿಳಿಸಿದರು.