ಶಿವಮೊಗ್ಗ: ಕೊರೊನಾ ವೈರಸ್ ಜಿಲ್ಲೆಗೆ ಕಾಲಿರಿಸದಂತೆ ತಡೆಯಲು ಜಿಲ್ಲಾಡಳಿತ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಜನರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಕೊರೊನಾ ನಿರ್ವಹಣೆಗೆ ಕ್ರಮಗಳ ಕುರಿತು ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ತರಕಾರಿ, ದಿನಸಿ ಇತ್ಯಾದಿ ಸಾಗಾಟಕ್ಕೆ ಸುಗಮ ವ್ಯವಸ್ಥೆ ಮಾಡುವ ಮೂಲಕ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಇಡೀ ನಗರಕ್ಕೆ ಕ್ರಿಮಿನಾಶಕ ಸಿಂಪಡಣೆ ಮಾಡಲು ತಿಳಿಸಲಾಗಿದೆ ಎಂದು ಹೇಳಿದರು.
ಕೊರೊನಾ ತಡೆಗೆ ಜಿಲ್ಲಾಡಳಿತದಿಂದ ಕಟ್ಟೆಚ್ಚರ, ಸಾರ್ವಜನಿಕರು ಸಹಕರಿಸಲು ಮನವಿ ಖಾಸಗಿ ವೈದ್ಯರು ಸಹಕಾರ ನೀಡುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸಲಾಗುತ್ತಿದೆ. ಸಾರ್ವಜನಿಕರು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಯಾವುದೇ ಗ್ರಾಮಸ್ಥರು, ತಮ್ಮ ಗ್ರಾಮಗಳಿಗೆ ಬೇರೆ ಜನರು ಪ್ರವೇಶಿಸದಂತೆ ರಸ್ತೆ ತಡೆ ನಡೆಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಅಧಿಕಾರಿಗಳಿಗೆ ಸೂಚನೆ
ರೈತರು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಾಟ ಮಾಡಲು ಯಾವುದೇ ನಿರ್ಬಂಧ ವಿಧಿಸಬಾರದು. ಹಳ್ಳಿಗಳಲ್ಲಿ ಮದ್ಯ ಮಾರಾಟ ಆಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು. ಪ್ರತಿ ತಾಲೂಕಿನಲ್ಲಿ ಕಂಟ್ರೋಲ್ ರೂಂ ಆರಂಭಿಸಬೇಕು. ನೆರೆಯ ಜಿಲ್ಲೆಯಲ್ಲಿ ಹಕ್ಕಿಜ್ವರ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಕೋಳಿ ಹಾಗೂ ಮೊಟ್ಟೆ ಮಾರಾಟ ನಿರ್ಬಂಧಿಸಿರುವುದರ ಬಗ್ಗೆ ಒಂದೆರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಬೇಕು. ಇದಕ್ಕಾಗಿ ತಜ್ಞರ ಸಮಿತಿಯನ್ನು ರಚಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಇದೇ ವೇಳೆ ಮಾತನಾಡಿದ ಲೋಕಸಭಾ ಸದಸ್ಯ ಬಿ.ಆರ್.ರಾಘವೇಂದ್ರ, ನಾವೀಗ ಕೊರೊನಾ ವೈರಸ್ ಹರಡುವ ಮೂರನೇ ಹಂತದಲ್ಲಿ ಇದ್ದೇವೆ. ಜನ ಜಾಗೃತರಾಗಿ ಅಂತರ ಕಾಯ್ದುಕೊಳ್ಳಬೇಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿರವರು ಹೇಳಿದಂತೆ ಜನ ಸಹಕರಿಸಬೇಕಿದೆ. ಜನ ತಮ್ಮ ಅವಶ್ಯಕತೆ ಹೊರತು ಹೊರಗೆ ಬರಬಾರದು. ಜನರು ಕೂಡಾ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ವಿನಂತಿ ಮಾಡಿಕೊಂಡರು.
ಅಲ್ಲದೆ ಎಂಆರ್ಎಸ್ನ ವಿದ್ಯುತ್ ಪೂರೈಕೆ 220 ಕೆವಿಯನ್ನು ಅದಷ್ಟು ಬೇಗ ದುರಸ್ತಿ ಮಾಡಲು ಕೆಪಿಟಿಸಿಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಅವರಿಗೆ ಸೂಚನೆ ನೀಡಲಾಗಿದೆ. ರೈತರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲು ಆದಷ್ಟು ಬೇಗನೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.