ಶಿವಮೊಗ್ಗ:ರಾಜ್ಯ ರೈತ ಸಂಘಕ್ಕೆ ಅಪಮಾನ ಮಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ನೂತನ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ರೈತ ಸಂಘದ ಕಚೇರಿಯಲ್ಲಿ ರಾಜ್ಯ ಪದಾಧಿಕಾರಿಗಳು ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ನೂತನ ಅಧ್ಯಕ್ಷ ಬಸವರಾಜಪ್ಪ ಅವರು ಮಾಹಿತಿ ನೀಡಿದರು.
ರಾಜ್ಯ ರೈತ ಸಂಘ ತ್ಯಾಗ- ಬಲಿದಾನದಿಂದ ಹುಟ್ಟಿದ ಸಂಘಟನೆಯಾಗಿದೆ. ರೈತ ಸಂಘಕ್ಕಾಗಿ ರೈತರು ಹೋರಾಟ ನಡೆಸುವಾಗ ಸರ್ಕಾರದ ಗುಂಡಿಗೆ 153 ಜನ ಹುತಾತ್ಮರಾಗಿದ್ದಾರೆ. ಲಕ್ಷಾಂತರ ಜನ ಪೊಲೀಸರ ಲಾಠಿ- ಬೂಟಿನೇಟು ತಿಂದು ಜೈಲು ವಾಸ ಅನುಭವಿಸಿದ್ದಾರೆ. ಇಂತಹ ಸಂಘಟನೆಯು ಈಗ ತಲೆ ತಗ್ಗಿಸುವಂತಾಗಿದೆ. ರೈತರನ್ನು ಅನುಮಾನದಿಂದ ನೋಡುವಂತಾಗಿದೆ ಎಂದರು.
ರಾಜ್ಯ ರೈತ ಸಂಘದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ ಫೋನ್ ರಿಸೀವ್ ಮಾಡುತ್ತಿಲ್ಲ: ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಪೋನ್ ಮಾಡಿದರೆ ಅವರು ಪೋನ್ ತೆಗೆಯಲಿಲ್ಲ. ಇದರಿಂದ ತುರ್ತು ಸಭೆ ಕರೆದು ಕೆಲವು ನಿರ್ಣಯಗಳನ್ನು ಮಾಡಿದ್ದೇವೆ. ರಾಜ್ಯ ರೈತ ಸಂಘದ ರಾಜ್ಯ ಸಮಿತಿಯು 18 ಜಿಲ್ಲೆಯ ಪದಾಧಿಕಾರಿಗಳ ಸಭೆ ನಡೆಸಿದ್ದೇವೆ. ಉಳಿದವರು ನಮಗೆ ಬೆಂಬಲ ಸೂಚಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಮಿತಿಯು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾ ಮಾಡಿದೆ.
ಅವರ ಮೇಲಿನ ಆರೋಪದ ತನಿಖೆಗೆ ಸತ್ಯ ಶೋಧನ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯು ಮೂರು ತಿಂಗಳು ಪ್ರವಾಸ ನಡೆಸಿ, ವರದಿಯನ್ನು ನೀಡಲಿದೆ. ಹೆಚ್.ಆರ್.ಬಸವರಾಜಪ್ಪನಾದ ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದರು. ಈ ವೇಳೆ, ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಜರಿದ್ದರು.
ಇದನ್ನೂ ಓದಿ:ಟ್ರಾಫಿಕ್ ಪೊಲೀಸ್ ಜೊತೆ ಸಂಚಾರ ನಿಯಂತ್ರಣದ ಕೆಲಸ ನಿರ್ವಹಿಸಿದ 7 ರ ಬಾಲಕ !