ಶಿವಮೊಗ್ಗ: ಪಶ್ಚಿಮ ಘಟ್ಟದಲ್ಲಿರುವ ಕಪ್ಪೆಗಳ ಕುರಿತು ಹೊಸ ತಲೆಮಾರಿಗೆ ಅರಿವು ಮತ್ತು ಜಾಗೃತಿ ಮೂಡಿಸುವುದಕ್ಕಾಗಿ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಡಿ.18 ಮತ್ತು 19ರಂದು(ನಿನ್ನೆ ಮತ್ತು ಇಂದು) 'ಕಪ್ಪೆ ಹಬ್ಬ'ವನ್ನು ಆಯೋಜಿಸಿದ್ದಾರೆ.
'ಕಪ್ಪೆ ಹಬ್ಬ' ಎಂದ್ರೆ ಎಲ್ಲಾರೂ ಕಪ್ಪೆ ಮದುವೆ ಮಾಡಿಸುವುದು ಅಂದುಕೊಳ್ಳುತ್ತಾರೆ. ಆದ್ರೆ ನಿಜವಾಗಿಯೂ ಕಪ್ಪೆ ಹಬ್ಬ ಅಂದ್ರೆ, ಕಪ್ಪೆ ಸಂತತಿಯನ್ನು ಉಳಿಸಿ-ಬೆಳೆಸಲು ಮಾಡುವ ಜಾಗೃತಿ ಕಾರ್ಯಕ್ರಮ. ಕರ್ನಾಟಕ ಅರಣ್ಯ ಇಲಾಖೆಯು ಕಪ್ಪೆಗಳನ್ನು ಉಳಿಸುವ, ಅವುಗಳನ್ನು ಗುರುತಿಸುವ ಬಹು ಮುಖ್ಯ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಇದಕ್ಕಾಗಿ ಶಿವಮೊಗ್ಗ ಜಿಲ್ಲೆಯ ಶರಾವತಿ ಹಿನ್ನೀರಿನ ಸುಂದರ ಪರಿಸರದ ಮುಪ್ಪಾನೆ ಅರಣ್ಯ ಶಿಬಿರದಲ್ಲಿ ಮೊದಲ ಬಾರಿಗೆ ಕಪ್ಪೆ ಹಬ್ಬವನ್ನು ಆಯೋಜಿಸಲಾಗಿದೆ.
ಮುಪ್ಪಾನೆ ಅರಣ್ಯ ಶಿಬಿರದಲ್ಲಿ ಮೊದಲ ಬಾರಿಗೆ ಕಪ್ಪೆ ಹಬ್ಬ ಆಯೋಜನೆ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಗಿಡಕ್ಕೆ ನೀರು ಹಾಕುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಪಿಆರ್ ಒ ರೀತು ಕಕ್ಕರ್, ಶಿವಮೊಗ್ಗ ವನ್ಯಜೀವ ವಿಭಾಗದ ಡಿಎಫ್ಒ ಐ.ಎಂ.ನಾಗರಾಜ್, ಸಾಮಾಜಿಕ ಅರಣ್ಯದ ಡಿಎಫ್ಒ ಶಂಕರ್, ಕಾರ್ಗಲ್ ವಿಭಾಗದ ಅಧಿಕಾರಿಗಳು ಹಾಜರಿದ್ದರು. ಈ ವೇಳೆ ಚಿಟ್ಟೆ ಕುರಿತ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಕಪ್ಪೆ ಹಬ್ಬ ಏಕೆ?
ಕಪ್ಪೆ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಪಿಸಿಸಿಎಫ್ ಸಂಜಯ್ ಮೋಹನ್, ಇಂತಹ ಸುಂದರ ಪರಿಸರದಲ್ಲಿ ಕಪ್ಪೆ ಹಬ್ಬ ಆಚರಿಸುತ್ತಿರುವುದು ತುಂಬ ಸಂತೋಷ ತಂದಿದೆ. ಈ ಹಬ್ಬಕ್ಕೆ ಮಕ್ಕಳು ಇಷ್ಟೊಂದು ಸಂಖ್ಯೆಯಲ್ಲಿ ಭಾಗಿಯಾಗಿರುವುದು ಇನ್ನಷ್ಟು ಸಂತಸದ ವಿಚಾರ. ಅರಣ್ಯ ಇಲಾಖೆಯು ಆನೆ, ಹುಲಿ, ಚಿರತೆ, ಕರಡಿ, ಪಕ್ಷಿ ಹೀಗೆ ಜನರು ಗುರುತಿಸುವ ಪ್ರಾಣಿ, ಪಕ್ಷಿಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ, ಅವುಗಳನ್ನು ಸಂರಕ್ಷಿಸುವ ಕಾರ್ಯವನ್ನು ಬಹು ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಕಾಡಿನಲ್ಲಿರುವ ಪ್ರತಿ ಸಣ್ಣ ಜೀವಿಗಳನ್ನು ಉಳಿಸುವತ್ತಾ ಗಮನ ಹರಿಸಲಾಗುತ್ತಿದೆ. ಪರಿಸರದಲ್ಲಿ ಕಪ್ಪೆ ತನ್ನದೆ ಆದ ಸ್ಥಾನವನ್ನು ಹೊಂದಿದೆ. ಪರಿಸರದ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಅಷ್ಟೇ ಅಲ್ಲದೆ ಪರಿಸರದಲ್ಲಿನ ಸೂಕ್ಷ ಬದಲಾವಣೆಯನ್ನು ಬೇಗ ಗುರುತಿಸುತ್ತವೆ. ಇಂತಹ ಕಪ್ಪೆಗಳನ್ನು ಉಳಿಸಿ, ಗುರುತಿಸುವ ಕಾರ್ಯವನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಪ್ಪೆ ಹಬ್ಬವನ್ನು ಆಯೋಜಿಸಿದೆ ಎಂದರು.
ಎರಡು ದಿನದ ಕಪ್ಪೆ ಹಬ್ಬದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪರಿಸರ ಪ್ರೇಮಿಗಳು ಸೇರಿದಂತೆ ನೂರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಕಪ್ಪೆಗಳ ಸಂತತಿಗಳ ಬಗ್ಗೆ, ಅವುಗಳ ಹುಟ್ಟು, ಆಹಾರ ಸಪರಳಿ ಕುರಿತು ಮಾಹಿತಿ ನೀಡಲಾಯಿತು. ಕಪ್ಪೆಗಳು ಪ್ರಕೃತಿಯಲ್ಲಿನ ಕೀಟಗಳನ್ನು ತಿಂದು ಬದುಕುತ್ತದೆ. ಇದರಿಂದ ಕೀಟಗಳು ಕಡಿಮೆಯಾಗಿ ಉತ್ತಮ ಪರಿಸರವನ್ನು ಉಳಿಸುವಲ್ಲಿ ಇವು ಶ್ರಮಿಸುತ್ತವೆ.
400 ಕ್ಕೂ ಹೆಚ್ಚು ಕಪ್ಪೆ ಸಂತತಿ:
ನಮ್ಮ ಪಶ್ಚಿಮ ಘಟ್ಟದಲ್ಲಿ ನೂರಾರು ಕಪ್ಪೆಗಳಿವೆ. ಭಾರತದಲ್ಲಿ ಸದ್ಯಕ್ಕೆ 400 ಕ್ಕೂ ಹೆಚ್ಚು ಕಪ್ಪೆ ಸಂತತಿಗಳನ್ನು ಗುರುತಿಸಲಾಗಿದೆ. ಇನ್ನೂ ಅನೇಕ ಕಪ್ಪೆಗಳಿದ್ದು ಅವುಗಳನ್ನು ಗುರುತಿಸಬೇಕಿದೆ. ಕಪ್ಪೆಗಳು ಉಭಯವಾಸಿಗಳಾಗಿದ್ದು, ಚರ್ಮದ ಮೂಲಕ ಉಸಿರಾಡುತ್ತವೆ. ಇವುಗಳು ನೀರಿನಲ್ಲಿ ಹಾಗೂ ನೆಲದ ಮೇಲೂ ವಾಸವಾಗಿರುತ್ತವೆ. ಅತ್ಯಂತ ಸೂಕ್ಷ್ಮ ಜೀವಿಗಳಾದ ಕಪ್ಪೆಗಳು ಯಾರಿಗೂ ತೊಂದ್ರೆ ನೀಡದೆ ಪರಿಸರವನ್ನು ಸಂರಕ್ಷಿಸುತ್ತವೆ. ಕಪ್ಪೆಗಳು ಹಾವು, ಹದ್ದಿಗೆ ಆಹಾರ. ಆದರೆ ಮಾನವ ಆಹಾರ ಸರಪಳಿ ವ್ಯವಸ್ಥೆಯನ್ನೇ ಹದಗೆಡಿಸಿ, ಪರಿಸರ ನಾಶ ಮಾಡಲು ಮುಂದಾಗಿದ್ದಾನೆ ಎಂದು ವಿದ್ಯಾರ್ಥಿನಿಯರು ಅಭಿಪ್ರಾಯ ವ್ಯಕ್ತಪಡಿಸಿದರು.