ಶಿವಮೊಗ್ಗ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದ ನೆರೆ ಪರಿಹಾರ ನೀಡಲು ಹಣವಿಲ್ಲದೆ ಒದ್ದಾಡುತ್ತಿದ್ದಾರೆ. ಇತ್ತ ಕೇಂದ್ರದಿಂದಲೂ ಸಹಕಾರ ದೊರೆಯುತ್ತಿಲ್ಲ ಎಂದು ಕುಟುಕಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಸಂತ್ರಸ್ತರಿಗೆ ಪರಿಹಾರ ನೀಡಲು ಆಗದಿದ್ದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ನಗರದಲ್ಲಿ ಪ್ರವಾಹಕ್ಕೆ ಸಿಲುಕಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹದಿಂದ ಶೇ.50ರಷ್ಟು ಹಾನಿಯಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಆಸಕ್ತಿ ತೋರದಿರುವುದು ನೋವಿನ ಸಂಗತಿ. ಈ ಪ್ರವಾಹದ ಅನಾಹುತ ಮನಗಂಡು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಘೋಷಿಸಬೇಕು. ನರೇಂದ್ರ ಮೋದಿ ಅವರು ರಾಜ್ಯಕ್ಕೆ ಖುದ್ದು ಭೇಟಿ ನೀಡಬೇಕೆಂದು ಆಗ್ರಹಿಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇನ್ನು ಗೃಹ ಸಚಿವ ಅಮಿತ್ ಶಾ ತೋರಿಕೆಗೆ ಮಾತ್ರ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಮೋದಿ ಬೇರೆಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ರಾಜ್ಯ ಪ್ರವಾಹದ ಕುರಿತು ಏನನ್ನೂ ಮಾತನಾಡದೆ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಇದನ್ನು ರಾಜ್ಯ ಬಿಜೆಪಿಯವರು ಯಾಕೆ ಪ್ರಶ್ನಿಸುತ್ತಿಲ್ಲ. ಈ ಬಗ್ಗೆ ನಾವು ಮಾತೆತ್ತಿದ್ದರೆ ದೇಶ ದ್ರೋಹಿಗಳಾಗುತ್ತೇವೆ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೂ ಏನು ಪ್ರಯೋಜನವಿಲ್ಲ. ಅಲ್ಲದೆ, ಸಿಎಂ ಸರ್ವ ಪಕ್ಷಗಳ ಸಭೆಯನ್ನೂ ಕರೆದಿಲ್ಲ ಎಂದರು. ಇನ್ನುಯಡಿಯೂರಪ್ಪ ಫೋನ್ ಕದ್ದಾಲಿಕೆಯ ಪ್ರಕರಣವನ್ನು ಸಿಬಿಐಗೆ ವಹಿಸಿರುವುದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಇದರ ತನಿಖೆಗೆ ಕೇಂದ್ರದ ಸಂಸ್ಥೆಗಳ ಮೊರೆ ಹೋಗಿರುವುದು ನೋಡಿದರೆ, ಅವರಿಗೆ ರಾಜ್ಯ ತನಿಖಾ ಸಂಸ್ಥೆಗಳ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲ ಎಂಬುದು ತಿಳಿಯುತ್ತದೆ. ಐಎಂಎ, ಗೌರಿ ಹತ್ಯೆ ಪ್ರಕರಣ ಪತ್ತೆ ಹಚ್ಚಿದ ಎಸ್ಐಟಿಯನ್ನೂ ಕಡೆಗಣಿಸಿರುವುದು ಎಷ್ಟು ಸರಿ ಎಂದು ಕೆಪಿಸಿಸಿ ಅಧ್ಯಕ್ಷರು ಪ್ರಶ್ನಿಸಿದರು.