ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸುವ ಜೊತೆಗೆ ಮತ್ತಷ್ಟು ಬೆಳೆಸಬೇಕಿದೆ. ಹೀಗಾಗಿ ನನ್ನ ಕೊನೆಯ ಉಸಿರು ಇರುವವರೆಗೆ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಗರದ ಶುಭ ಮಂಗಳ ಕಲ್ಯಾಣ ಮಂದಿರದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಯಂತಿ ಪ್ರಯುಕ್ತ 'ದೀಪದಿಂದ ಕಮಲದವರೆಗೆ' ಎನ್ನುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾನು ಬದುಕಿರುವವರೆಗೂ ಪಕ್ಷದ ಸಂಘಟನೆಗಾಗಿ ದುಡಿಯುತ್ತೇನೆ. ಹಾಗೆಯೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಪಂಡಿತ್ ದೀನದಯಾಳ್ ಅವರ ಚಿಂತನೆಗಳು ನನ್ನ ಮೇಲೆ ಪ್ರಭಾವ ಬೀರಿದ್ದವು. ನೀವೂ ಸಹ ಅವರ ಚಿಂತನೆಗಳನ್ನು, ಆಶಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿವಮೊಗ್ಗದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಯಂತಿ ಆಚರಣೆ ನಂತರ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, ಡಿ.ಹೆಚ್. ಶಂಕರ್ ಮೂರ್ತಿ ಹಾಗೂ ಯಡಿಯೂರಪ್ಪನವರನ್ನು ದೀಪ ಹಾಗೂ ಕಮಲಕ್ಕೆ ಹೋಲಿಸಿದರು. ಶಂಕರ್ ಮೂರ್ತಿಗಳು ದೀಪ ಆದ್ರೆ ಯಡಿಯೂರಪ್ಪನವರು ಕಮಲ ಇದ್ದಂತೆ. ದೀನದಯಾಳ್ ಅವರ ಆಶಯದಂತೆ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗುತ್ತಿದೆ ಹಾಗೂ ಮುಂದೆ ಕಾಶಿಯಲ್ಲಿ ವಿಶ್ವನಾಥ ದೇವಾಲಯ ಆಗಲಿದೆ. ಜೊತೆಗೆ ಗೋಹತ್ಯೆ ಸಹ ನಿಲ್ಲಲಿದೆ ಎಂದರು.
ಉತ್ತಮ ಶಾಸಕ ಪ್ರಶಸ್ತಿ ಪಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ವಿಧಾನ ಪರಿಷತ್ ಸಭಾಪತಿ ಡಿ.ಹೆಚ್ ಶಂಕರ್ ಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ನಗರಾಧ್ಯಕ್ಷ ಜಗದೀಶ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.