ಶಿವಮೊಗ್ಗ : ಮಳೆ ಬಂದು ಮನೆ ಬಿದ್ದವರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಸಿಎಂ ಆದೇಶ ಹೊರಡಿಸಿದರೂ ಸಹ ಭದ್ರಾವತಿ ತಾಲೂಕು ಆಡಳಿತ ಮಾತ್ರ ಮನೆ ಬಿದ್ದವರಿಗೆ ಇನ್ನೂ ತಕ್ಷಣದ ಪರಿಹಾರವನ್ನು ನೀಡಿಲ್ಲವಂತೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಳೆಯ ಮಣ್ಣಿನ ಮನೆಗಳು ಹಾಗೂ ಸ್ಲಂನಲ್ಲಿನ ಮನೆಗಳು ಧರೆಗುರುಳುತ್ತಿವೆ. ತಮ್ಮ ಮನೆ ಬಿದ್ದಿದೆ ಎಂದು ಸ್ಥಳೀಯ ನಗರಸಭೆ, ಮಹಾನಗರ ಪಾಲಿಕೆ ಸದಸ್ಯರ ಮೂಲಕ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಸಹ ತಾಲೂಕು ಆಡಳಿತ ಗಮನ ಹರಿಸುತ್ತಿಲ್ಲ ಎಂಬುದು ನೆರೆ ಸಂತ್ರಸ್ತರ ಆರೋಪವಾಗಿದೆ.
ಮಳೆ, ನೆರೆ ಬಂದಾಗ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ತಹಶೀಲ್ದಾರ್ಗಳು ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂಬ ಸಬೂಬು ಹೇಳಿ ಜನರಿಗೆ ಇನ್ನಷ್ಟು ಸಂಕಷ್ಟ ನೀಡುತ್ತಿದ್ದಾರೆ. ಭದ್ರಾವತಿ ಪಟ್ಟಣದ ಸುರಗಿನತೋಪು ಬಡಾವಣೆ ಕೊಳಚೆ ಪ್ರದೇಶವಾಗಿದ್ದು, ಇಲ್ಲಿ ತಮಗೆ ಅನುಕೂಲಕರವಾದ ರೀತಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಸುರಗಿತೋಪಿನಲ್ಲಿ ಈಗಾಗಲೇ ಹತ್ತಾರು ಮನೆಗಳು ಬಿದ್ದಿವೆ. ಇಲ್ಲಿಗೆ ಸ್ಥಳೀಯ ವಾರ್ಡ್ನ ನಗರಸಭೆ ಸದಸ್ಯರಾದ ಜಯಶೀಲ ಸುರೇಶ್ ಅವರು ಬಂದು ಹೋಗಿದ್ದು ಬಿಟ್ಟರೆ, ಬೇರೆ ಯಾವ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ನಗರಸಭೆ ಸದಸ್ಯರಾದ ಜಯಶೀಲ ಸುರೇಶ್ ಅವರು ಮನೆ ಬಿದ್ದ ತಕ್ಷಣ ಬಂದು ಸಹಾಯ ಮಾಡಿದ್ದಾರೆ. ಆದ್ರೆ ಅವರು ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಭದ್ರಾವತಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ ಅವರು ಈಗಲಾದರೂ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.