ಶಿವಮೊಗ್ಗ:ನೂತನವಾಗಿ ಮದುವೆಯಾದ ವರನ ಮನೆ ಕುಸಿದು ಬಿದ್ದು 13 ಜನ ಗಾಯಾಳುಗಳಾಗಿರುವ ಘಟನೆ ಭದ್ರಾವತಿ ತಾಲೂಕು ಅರಹತೊಳಲು ಗ್ರಾಮದಲ್ಲಿ ನಡೆದಿದೆ. ಅರಹತೂಳಲು ಗ್ರಾಮದ ಗಣೇಶ ಎಂಬುವರ ಮದುವೆ ಕಳೆದ ನಾಲ್ಕೈದು ದಿನದ ಹಿಂದೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹನಗವಾಡಿಯ ವಧುವಿನ ಜೊತೆ ನಡೆದಿತ್ತು.
ಮದುವೆಯು ಹರಿಹರ ಶಾಸಕ ರಾಮಪ್ಪನವರು ನಡೆಸಿದ ಸಾಮೂಹಿಕ ವಿವಾಹದಲ್ಲಿ ನೇರವೇರಿತ್ತು. ನಿನ್ನೆ ವರನ ಮನೆಯಲ್ಲಿ ಬೀಗರ ಊಟ ಏರ್ಪಡಿಸಲಾಗಿತ್ತು. ನಿನ್ನೆ ರಾತ್ರಿ ಊಟ ಮಾಡಿ ಮಲಗಿದವರ ಮೇಲೆ ಬೆಳಗಿನ ಜಾವ ಮನೆಯ ಒಂದು ಕಡೆಯ ಗೋಡೆ ಕುಸಿದು ಬಿದ್ದಿದೆ. ಇದರಿಂದ ಮನೆಗೆ ಬಂದ ನೆಂಟರು ಸೇರಿದಂತೆ ಒಟ್ಟು 13 ಮಂದಿ ಗಾಯಗೊಂಡಿದ್ದರು. ತಕ್ಷಣ ಗ್ರಾಮಸ್ಥರ ಸಹಕಾರದಿಂದ ಹೊಳ ಹೊನ್ನೂರು ಆಸ್ಪತ್ರೆಗೆ ಹಾಗೂ ಭದ್ರಾವತಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗಿದೆ.