ಶಿವಮೊಗ್ಗ: ರಾಜ್ಯದ ಗೃಹ ಸಚಿವರಿಗೆ, ಅಫ್ಘಾನಿಸ್ತಾನದಲ್ಲಿ ಕನ್ನಡಿಗರು ಎಷ್ಟು ಜನ ಸಿಲುಕಿದ್ದಾರೆ ಎಂಬ ಮಾಹಿತಿ ಇಲ್ಲ. ಶಿವಮೊಗ್ಗದಲ್ಲಿ ಮಾಧ್ಯಮದವರು ಗೃಹ ಸಚಿವ ಆರಗ ಜ್ಞಾನೇಂದ್ರರವರಿಗೆ ಅಫ್ಘಾನಿಸ್ತಾನದಲ್ಲಿ ಕನ್ನಡಿಗರು ಎಷ್ಟು ಜನ ಸಿಲುಕಿದ್ದಾರೆ ಎಂಬ ಮಾಹಿತಿ ಕೇಳಿದ್ದು, ಸಚಿವರು ನಮ್ಮ ರಾಜ್ಯದವರು ಎಷ್ಟು ಜನ ಅಂತಾ ನನ್ನ ಬಳಿ ಮಾಹಿತಿ ಇಲ್ಲ, ಕೇಂದ್ರ ಸರ್ಕಾರ ಅದನ್ನು ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನ್‌ನಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಗೃಹ ಸಚಿವರಿಗೆ ಏನೂ ಗೊತ್ತಿಲ್ವಂತೆ.. ಕನ್ನಡಿಗರ ರಕ್ಷಣೆಗೆ ಸಿಒಡಿ ಅಧಿಕಾರಿ ಉಮೇಶ್ ನೇಮಕ :ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಲು ಸಿಒಡಿಯ ಹಿರಿಯ ಅಧಿಕಾರಿ ಉಮೇಶ್ ಅವರನ್ನು ನೇಮಕ ಮಾಡಲಾಗಿದೆ. ಅವರ ಫೋನ್ ನಂಬರ್ ವೆಬ್ನಲ್ಲಿ ಹಾಕಲಾಗಿದೆ.
ಅಫ್ಘಾನಿಸ್ತಾನದಲ್ಲಿ ಇರುವವರ ಸಂಬಂಧಿಕರು ಸಂಪರ್ಕ ಮಾಡಬಹುದಾಗಿದೆ. ಉಮೇಶ್ ಈ ಹಿಂದೆ ಬೇರೆ-ಬೇರೆ ದೇಶದಲ್ಲಿ ಸಿಲುಕಿದವರನ್ನು ಕರೆತಂದಿರುವ ಅನುಭವ ಹೊಂದಿದ್ದಾರೆ. ಹಾಗಾಗಿ, ಉಮೇಶ್ ಅವರನ್ನು ಈ ಕಾರ್ಯಕ್ಕೆ ನೇಮಕ ಮಾಡಲಾಗಿದೆ ಎಂದರು.
ಸಂಬಂಧಿಕರು ಮಾಹಿತಿ ನೀಡಿದ್ರೆ ರಕ್ಷಣೆ ಮಾಡಬಹುದು :ತೀರ್ಥಹಳ್ಳಿಯ ಫಾದರ್ ರಾಬರ್ಟ್ ರಾಡ್ರಿಗಸ್ ಸಂಬಂಧಿಕರು ನನ್ನ ಬಳಿ ಬಂದಿಲ್ಲ. ಅವರು ಬಂದು ಮಾಹಿತಿ ನೀಡಿದ್ರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ನಮ್ಮ ರಾಜ್ಯದವರು ಎಷ್ಟು ಜನ ಸಿಲುಕಿದ್ದಾರೆ ಎಂಬ ಮಾಹಿತಿ ಪಡೆದು ತಿಳಿಸುವೆ. ಅಫ್ಘಾನಿಸ್ತಾನದಲ್ಲಿ ಇರುವ ಕನ್ನಡಿಗರು ಯಾರೂ ಹೆದರುವ ಪ್ರಶ್ನೆಯೇ ಇಲ್ಲ. ಯಾರು ಎಲ್ಲಿ ಇದ್ದಾರೆ ಅಂತಾ ಸಂಬಂಧಿಕರು ಮಾಹಿತಿ ನೀಡಿದ್ರೆ ರಕ್ಷಣೆ ಮಾಡಬಹುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಕ್ರೈಂತಡೆಗೆ ಕ್ರಮ :ಬೆಂಗಳೂರಿನಲ್ಲಿ ಕ್ರೈಂ ಕೇಸ್ಗಳು ಹೆಚ್ಚಾಗುತ್ತಿವೆ. ಆದ್ರೆ, ರೌಡಿಗಳಿಗೆ ಭಯ ಹುಟ್ಟಿಸುವ ಕೆಲಸವನ್ನು ನಮ್ಮ ಅಧಿಕಾರಗಳು ಮಾಡುತ್ತಿದ್ದಾರೆ. ಆದರೂ ಪ್ರಕರಣಗಳು ಪತ್ತೆಯಾಗುತ್ತಿವೆ. ರೌಡಿಸಂ, ಮಾದಕ ವಸ್ತು ಮಾರಾಟ, ಸಾಗಾಟ, ರಿಯಲ್ ಎಸ್ಟೇಟ್ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಇನ್ನು, ಅಪರಾಧದಲ್ಲಿ ಭಾಗಿಯಾದವರಿಗೆ ಶಿಕ್ಷೆ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ. ಇದಕ್ಕೆ ಸರ್ಕಾರಿ ವಕೀಲರು ಹೆಚ್ಚು ಮುತುವರ್ಜಿ ವಹಿಸಬೇಕಿದೆ. ಆದ್ರೆ, ಅದು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಬೆಳಗಾವಿಯಲ್ಲಿ ನೆರೆಹಾನಿಯ ಸಮೀಕ್ಷೆ ಶೀಘ್ರವೇ ಪೂರ್ಣಗೊಳಿಸಲು ಸಿಎಂ ಬೊಮ್ಮಾಯಿ ಸೂಚನೆ
ಸೈಬರ್ ಕ್ರೈಂ ನಿಯಂತ್ರಣದ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈಗ ಈ ವಿಭಾಗವನ್ನು ಬೇರೆ ಬೇರೆ ಜಿಲ್ಲೆಗೆ ವಿಸ್ತರಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ಕಮಿಷನರ್ ನೇಮಕ ಕುರಿತು ಪ್ರತಿಕ್ರಿಯಿಸಿ, ಶಿವಮೊಗ್ಗ ಸಿಟಿಯ ಜನಸಂಖ್ಯೆ ಕಡಿಮೆ ಇದೆ. ಆದರೆ, ಭದ್ರಾವತಿಯನ್ನು ಸೇರಿಸಿದ್ರೆ ಆಗಬಹುದು ಎಂದರು.