ಶಿವಮೊಗ್ಗ: ಕಾಂಗ್ರೆಸ್ ಅವಧಿಯಲ್ಲಿ ಅನೇಕ ಪರೀಕ್ಷಾ ಹಗರಣಗಳು ನಡೆದಿವೆ. ಆದರೆ, ಕಾಂಗ್ರೆಸ್‌ನವರು ಇದನ್ನೆಲ್ಲ ಮರೆತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಾಲದಲ್ಲಿ ಇಂತಹ ಹಲವು ಪರೀಕ್ಷೆಗಳು ವಿಫಲವಾಗಿವೆ. ಅವರು ಮೊದಲು ತಮ್ಮ ವೈಫಲ್ಯತೆಗಳನ್ನು ಹೇಳಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಪಿಎಸ್ಐ ಹಗರಣದ ತನಿಖೆಯ ಕುರಿತು ಪ್ರತಿಕ್ರಿಯಿಸಿದ ಅವರು, ಪಿಎಸ್ಐ ಹಗರಣದ ತನಿಖೆ ನಡೆಯುತ್ತಿದೆ. ತನಿಖೆಗೆ ಸಿಐಡಿಯ ಪ್ರತ್ಯೇಕ ತಂಡವನ್ನು ನೇಮಕ ಮಾಡಲಾಗಿದೆ. ಪಾರದರ್ಶಕವಾಗಿ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಇನ್ನು ಪೂರ್ತಿ ತನಿಖೆಯಾಗಲಿ, ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳಿದರು. ಕಷ್ಟಪಟ್ಟು ಓದಿದ, ಬಡಮಕ್ಕಳಿಗೆ ಅನ್ಯಾಯವಾಗದಂತೆ ಈ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಕಾಂಗ್ರೆಸ್ ಅವಧಿಯಲ್ಲೂ ಹಗರಣಗಳು ನಡೆದಿದೆ ಎಂದಿರುವ ಗೃಹಸಚಿವ ಆರಗ ಜ್ಞಾನೇಂದ್ರ.. ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅವರು ಪದೇಪದೆ ನನ್ನ ಹತ್ತಿರ ಸಾಕ್ಷ್ಯಾಧಾರಗಳಿವೆ ಎಂದು ಹೇಳುತ್ತಿರುತ್ತಾರೆ.
ಬಂದು ಸಾಕ್ಷ್ಯಾಧಾರಗಳನ್ನು ಅಧಿಕಾರಿಗಳಿಗೆ ನೀಡಿ ಎಂದರೆ, ಬೆನ್ನು ತೋರಿಸುತ್ತಾರೆ ಎಂದು ಟೀಕಿಸಿದರು. ಅವರ ದೃಷ್ಟಿಯಲ್ಲಿ ಪ್ರಾಮಾಣಿಕ ತನಿಖೆ ನಡೆಯಬಾರದು. ತನಿಖೆಯ ದಾರಿ ತಪ್ಪಿಸುವುದೇ ಖರ್ಗೆಯವರ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಓದಿ :ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಆಯ್ಕೆಗೆ ಜೆಡಿಎಸ್ ವರಿಷ್ಠರ ಲೆಕ್ಕಾಚಾರವೇನು?