ಶಿವಮೊಗ್ಗ: ಪಂಚಾಯತ್ ರಾಜ್ ದಿವಸ್ ಆಚರಿಸುವ ಸಲುವಾಗಿ ಏಪ್ರಿಲ್ 24ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಗ್ರಾಮವನ್ನು ಸಜ್ಜುಗೊಳಿಸಲಾಗುತ್ತಿದೆ. ಪ್ರಧಾನಿ ಬರಲು ಒಂದೂವರೆ ತಿಂಗಳು ಬಾಕಿ ಇದ್ದು, ಕೆಲ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಜಿಲ್ಲಾಡಳಿತ ಪ್ರತಿ ಕಾಮಗಾರಿಗಳನ್ನು ಮುತುವರ್ಜಿಯಿಂದ ನಡೆಸುತ್ತಿದೆ.
ಹೊಳಲೂರು ಗ್ರಾಮದಲ್ಲಿ ಸುಮಾರು 5 ಸಾವಿರ ಜನಸಂಖ್ಯೆ ಇದೆ. ಹಾಲಿ ಗ್ರಾಮವನ್ನು ಹೈಟೆಕ್ ಗ್ರಾಮವನ್ನಾಗಿ ಮಾರ್ಪಡಿಸಲಾಗುತ್ತಿದೆ. ಕಾಂಕ್ರೀಟ್ ರಸ್ತೆ, ಬಾಕ್ಸ್ ಚರಂಡಿ, ಕಸ ವಿಲೇವಾರಿ ಘಟಕ, ಜಲ ಜೀವನ್ ಯೋಜನೆ ಕಾಮಗಾರಿ, ಇಂಗುಗುಂಡಿ, ಶೌಚಾಲಯ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಭರದಿಂದ ನಡೆಸಲಾಗುತ್ತಿದೆ.
ಹೊಳಲೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಜೊತೆಗೆ ಭಾರತೀಯ ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ದೂರವಾಣಿ ಸಂಪರ್ಕ ಕೇಂದ್ರ, ಪಶು ವೈದ್ಯಕೀಯ ಕೇಂದ್ರ, ಸರ್ಕಾರಿ ಶಾಲೆಗಳು, ಡಿಜಿಟಲ್ ಗ್ರಂಥಾಲಯ, ಸಂತೆ ಮಾರುಕಟ್ಟೆ ಸೇರಿದಂತೆ ಎಲ್ಲ ಸೌಲಭ್ಯಗಳು ಲಭ್ಯವಿದೆ. ಈ ಎಲ್ಲ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ಸಿಂಗರಿಸಲಾಗುತ್ತಿದೆ. ಅಲ್ಲದೇ ಆಯಾ ಇಲಾಖೆಯ ಕಂಪೌಂಡ್ಗಳಲ್ಲಿ ಇಲಾಖೆಯ ಕಾಮಗಾರಿ, ಪ್ರಗತಿಯ ಕುರಿತು ಚಿತ್ರಿಸಲಾಗುತ್ತಿದೆ. ಇದರಿಂದ ಕಂಪೌಂಡ್ ಅಂದವಾಗಿ ಕಾಣಿಸುತ್ತಿದೆ.