ಶಿವಮೊಗ್ಗ :ದುರ್ಗಿಗುಡಿ ಸರ್ಕಾರಿ ಶಾಲೆ ಮೇಲೆ ಒತ್ತಡ ಹಿಂದಿನ ವರ್ಷಗಳಿಗಿಂತಲೂ ಈ ಬಾರಿ ಹೆಚ್ಚಾಗಿದೆ. ಇದಕ್ಕೆ ಕಾರಣ ಆಂಗ್ಲ ಮಾಧ್ಯಮ ಜೊತೆಗೆ ಗುಣಮಟ್ಟದ ಶಿಕ್ಷಣ. 1920-21ರಲ್ಲಿ ಆರಂಭವಾದ ಈ ಶಾಲೆಗೆ 1967ರಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭವಾಯಿತು. ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮಕ್ಕೆ ಅವಕಾಶ ನೀಡಿದ್ದು ಅದೇ ಮೊದಲು. ಅಲ್ಲಿಂದ ಈ ಶಾಲೆಯಲ್ಲಿ ಮಕ್ಕಳ ಕೊರತೆ ಉಂಟಾಗಿಲ್ಲ.
ಗುಣಮಟ್ಟದ ಶಿಕ್ಷಣಕ್ಕೆ ಹೇಳಿ ಮಾಡಿಸಿದ್ದಂತಿರುವ ಶಾಲೆ ; ಸೀಟ್‌ಗಾಗಿ ಶಾಸಕರು, ಸಚಿವ ಕಡೆಯಿಂದಲೂ ಒತ್ತಡ.. ಉತ್ತಮ ಶಿಕ್ಷಕರೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಶಾಲೆಗೆ ಮತ್ತಷ್ಟು ಸೌಲಭ್ಯಗಳು ಸಿಗಬೇಕಿದೆ. ಸರ್ಕಾರ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು, ಕೊಠಡಿಗಳು, ಮೌಲಸೌಕರ್ಯ ಒದಗಿಸಲು ವಿಫಲವಾಗಿದೆ. ಸಾವಿರ ಮಕ್ಕಳಿರುವ ಶಾಲೆಯಲ್ಲಿ ಕೇವಲ 21 ಶಿಕ್ಷಕರಿದ್ದಾರೆ. ಅದರಲ್ಲಿ ಒಬ್ಬರು ದೈಹಿಕ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು.
ಪಾಠ ಮಾಡುವುದು 19 ಮಂದಿ ಮಾತ್ರ. ಒಬ್ಬ ಶಿಕ್ಷಕರಿಗೆ 35 ಮಂದಿ ವಿದ್ಯಾರ್ಥಿಗಳಂತೆ ಕಾರ್ಯಭಾರ ಹಂಚಿದೆ. ಆದರೆ, ಒಬ್ಬರೇ ಶಿಕ್ಷಕರು 50ರಿಂದ 70 ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು. ಶಿಕ್ಷಕರ ಜತೆ ಕೊಠಡಿಗಳ ಕೊರತೆ ಕೂಡ ಇದೆ. ಇರುವ 19 ಕೊಠಡಿಗಳಲ್ಲೇ ಮಕ್ಕಳನ್ನು ಕೂರಿಸಲಾಗುತ್ತಿದೆ.
ಅಗತ್ಯಕ್ಕಿಂತ ಹೆಚ್ಚಿನ ಮಕ್ಕಳು ಒಂದೇ ಕೊಠಡಿಯಲ್ಲಿ ಕೂರಿಸಬೇಕಾದ ಅನಿವಾರ್ಯತೆ. ಈಗಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಐದಾರು ಹೆಚ್ಚುವರಿ ಕೊಠಡಿಗಳು ಬೇಕು. ಇಷ್ಟು ದೊಡ್ಡ ಶಾಲೆಗೆ ಡಿ ಗ್ರೂಪ್, ಕ್ಲರ್ಕ್, ಅಟೆಂಡರ್ ಅಗತ್ಯ ಇದೆ. ಶಿಕ್ಷಕರೇ ಈಗ ಕಸ ಗುಡಿಸುವುದು, ಸ್ವಚ್ಛತೆ, ದಾಖಲೆಗಳ ನಿರ್ವಹಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್‌ಗೆ ಬರ್ತಿಲ್ಲ ಜನ!
ದುರ್ಗಿಗುಡಿ ಶಾಲೆಗೆ 2021-22ನೇ ಸಾಲಿಗೆ 1100 ಮಂದಿ ಪ್ರವೇಶ ಪಡೆದಿದ್ದಾರೆ. ಇನ್ನಷ್ಟು ಮಕ್ಕಳು ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. 2020-21ರಲ್ಲಿ 969, 2019-20ರಲ್ಲಿ 916, 2018-19ರಲ್ಲಿ 904, 2017-18ರಲ್ಲಿ 900 ಮಕ್ಕಳು ದಾಖಲಾಗಿದ್ದಾರೆ. ಒಂದನೇ ತರಗತಿಗೆ ಈ ಬಾರಿ 140 ಮಕ್ಕಳು ದಾಖಲಾಗಿದ್ದಾರೆ. ಪ್ರತಿ ದಿನ ಪೋಷಕರು ದಾಖಲಾತಿಗೆ ಬರುತ್ತಿದ್ದು, ಶಿಕ್ಷಕರು ಅವರಿಗೆ ಮನವಿ ಮಾಡಿ, ಬಿಇಒ ಕಚೇರಿಗೆ ಕಳುಹಿಸುತ್ತಿದ್ದಾರೆ.
ಸರ್ಕಾರಿ ಶಾಲೆಗಳು ಅಂದರೆ ಮೂಗು ಮುರಿಯುತ್ತಿದ್ದ ಜನರು ಅದೇ ಸರ್ಕಾರಿ ಆಂಗ್ಲ ಮಾಧ್ಯಮಕ್ಕೆ ತಮ್ಮ ಮಕ್ಕಳನ್ನು ಸೇರಿಸುತ್ತಿರುವುದು ಸಂತಸದ ಸಂಗತಿ. ಹಾಗಾಗಿ, ಸರ್ಕಾರ ಇಂತಹ ಸರ್ಕಾರಿ ಶಾಲೆಗಳಿಗೆ ಇನ್ನಷ್ಟು ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡು ಹೊಗಲಿ ಎನ್ನುವುದೇ ನಮ್ಮ ಆಶಯ.