ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಶಿವಮೊಗ್ಗದಲ್ಲಿ ನಿನ್ನೆ ರಾತ್ರಿಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಆದೇಶಿಸಿದ್ದಾರೆ.
ಶಿವಮೊಗ್ಗ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್.. ಈ ಹಿನ್ನೆಲೆಯಲ್ಲಿ ಇಂದು ನಗರದ ಪ್ರಮುಖ ಸರ್ಕಲ್ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ವಹಿಸಲಾಗಿದೆ. ನಗರದಲ್ಲಿ ಯಾವುದೇ ರೀತಿಯಲ್ಲೂ ಶಾಂತಿ ಕದಡದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ವಾಹನ ಸವಾರರಿಗೆ ಪೊಲೀಸರು ಅನಗತ್ಯವಾಗಿ ಓಡಾಡದಂತೆ ಮನವಿ ಮಾಡುತ್ತಿದ್ದಾರೆ. ಹಾಗೆಯೇ ಕರ್ಫ್ಯೂ ಜಾರಿಯಲ್ಲಿರುವುದರಿಂದ ಯಾರೂ ಮನೆಯಿಂದ ಹೊರಬರದಂತೆ ಅನೌನ್ಸ್ ಮಾಡಲಾಗುತ್ತಿದೆ.
ಅಂಗಡಿ-ಮುಗ್ಗಟ್ಟುಗಳು ಬಂದ್ :ಕರ್ಫ್ಯೂ ಜಾರಿ ಹಿನ್ನೆಲೆ ನಗರದಲ್ಲಿ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ-ಮುಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಒಟ್ಟಾರೆ ಪೊಲೀಸ್ ಇಲಾಖೆ ಸಹ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಇದನ್ನೂ ಓದಿ:ಹರ್ಷ ಕುಟುಂಬಕ್ಕೆ ಒಂದು ತಿಂಗಳ ವೇತನ ಕೊಡಲು ಮುಂದಾದ ಶಾಸಕ ಭರತ್ ಶೆಟ್ಟಿ
ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾವು 4 ಜನರನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಹಳೇ ದ್ವೇಷಕ್ಕೆ ಸಂಬಂಧಿಸಿದಂತೆ ಈ ಘಟನೆ ಸಂಭವಿಸಿದೆ ಎಂಬುದನ್ನು ನಾವು ಬಲವಾಗಿ ನಂಬುತ್ತೇವೆ.
ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದ್ದು, ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಈ ಕುರಿತು ಹೆಚ್ಚಿನ ತನಿಖೆ ಎಂದು ಪೂರ್ವ ವಲಯದ ಡಿಐಜಿ ಡಾ.ಕೆ. ತ್ಯಾಗರಾಜನ್ ತಿಳಿಸಿದ್ದಾರೆ.