ಶಿವಮೊಗ್ಗ:ನಿರಂತರ ಮತ್ತು ಭಾರೀ ಮಳೆಯಿಂದಾಗಿ ನದಿಗಳು ಹಾಗೂ ಹಳ್ಳಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ತುಂಗಾ ನದಿಯಲ್ಲಿ 90 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನಗರದ ಹಲವು ಬಡಾವಣೆಗಳು, ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ನೀರು ತುಂಬಿ ಮನೆಗಳಿಗ ನುಗಿದ ಕಾರಣ ಈ ಭಾಗಗಳಲ್ಲಿ ಮಹಾನಗರ ಪಾಲಿಕೆಯು ಗಂಜಿ ಕೇಂದ್ರ ತೆರೆದಿದೆ.
ನಗರದ ಇಮಾನ್ ಬಾಡಾ, ಕುಂಬಾರ ಗುಂಡಿ, ಟಿಪ್ಪು ನಗರದ ನಿವಾಸಿಗಳಿಗೆ ಶಾದಿ ಮಹಲ್ನಲ್ಲಿ, ಕುಂಬಾರ ಗುಂಡಿ, ಸಿಗೆಹಟ್ಟಿ ನಿವಾಸಿಗಳಿಗೆ ಗಾಂಧಿ ಬಜಾರ್ನ ರಾಮಣ್ಣ ಪಾರ್ಕ್ನಲ್ಲಿ ಹಾಗೂ ಬಾಪೂಜಿ ನಗರದ ಜೋಸೆಫ್ ನಗರದ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸದ್ಯಕ್ಕೆ ಈ ಗಂಜಿ ಕೇಂದ್ರಗಳಲ್ಲಿ ಯಾರೂ ತಂಗುತ್ತಿಲ್ಲ. ಬದಲಾಗಿ ಊಟ ಸೇವಿಸಿ ಮರಳುತ್ತಿದ್ದಾರೆ.
ಗಂಜಿ ಕೇಂದ್ರದಲ್ಲಿ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ನಿರಾಶ್ರಿತರಿಗೆ ಆಹಾರ ವಿತರಿಸುತ್ತಿದ್ದಾರೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ನೀಡಲಾಗುತ್ತಿದೆ ಎನ್ನುತ್ತಾರೆ ಪಾಲಿಕೆಯ ಉಪಮೇಯರ್ ಚನ್ನಬಸಪ್ಪ.