ಕರ್ನಾಟಕ

karnataka

ETV Bharat / city

ಮಲೆನಾಡಲ್ಲಿ ಮಳೆ ಅವಾಂತರ: ಹಲವು ರಸ್ತೆಗಳು ಬಂದ್​, ಜನಜೀವನ ಅಸ್ತವ್ಯಸ್ತ - rain effect in shivmogga

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ. ಪರಿಣಾಮ ನದಿ, ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಒಂದೆಡೆ ಪ್ರವಾಹದ ಭೀತಿ ಎದುರಾದ್ರೆ ಇನ್ನೊಂದೆಡೆ ಜನಜೀವನ ಅಸ್ತವ್ಯಸ್ತವಾಗಿದೆ.

Heavy rain
ಮಳೆ

By

Published : Jul 24, 2021, 7:42 AM IST

ಶಿವಮೊಗ್ಗ: ಮಲೆನಾಡಿನಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಇದರಿಂದಾಗಿ ಪ್ರವಾಹ ಭೀತಿ ಎದುರಾಗಿದ್ದು, ಕೆಲವು ಕಡೆ ನದಿಗಳೆಲ್ಲ ತುಂಬಿ ಹೋಗಿವೆ. ಜೊತೆಗೆ ವಾಹನಗಳ ಸಂಚಾರಕ್ಕೆ ಸಹ ಅಡ್ಡಿಯಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಜಿಲ್ಲೆಯ ಮುಖ್ಯ ರಸ್ತೆಗಳ ಮೇಲೆ ನೀರು ಹರಿಯಲು ಪ್ರಾರಂಭಿಸಿರುವುದರಿಂದ ಕೆಲ ರಸ್ತೆಗಳು ಬಂದ್ ಆಗಿವೆ. ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಬಳಿಯ ಗುಡ್ಡ ಕುಸಿದ ಹಿನ್ನೆಲೆ ತೀರ್ಥಹಳ್ಳಿ- ಆಗುಂಬೆ ರಸ್ತೆ ಬಂದ್ ಆಗಿದೆ. ಜೊತೆಗೆ ಶಿವಮೊಗ್ಗ ತಾಲೂಕಿನ ಗಾಜನೂರು ಬಳಿ ರಸ್ತೆ ಮೇಲೆ ಸಹ ನೀರು ಹರಿಯುತ್ತಿದೆ.‌ ಸಾಗರ ತಾಲೂಕಿನ ಮಂಡಗಳಲೆ ಗ್ರಾಮದ ನೂರಾರು ಎಕರೆ ಕೃಷಿ ಭೂಮಿ ನೀರಿನಿಂದ ಆವೃತವಾಗಿವೆ. ಸಾಗರ ತಾಲೂಕಿನ ಇರುವಕ್ಕಿ ಹಾಗೂ ಕರಡಿ ಗ್ರಾಮದ ರಸ್ತೆ ಸಂಪರ್ಕ ಸಹ ಸ್ಥಗಿತಗೊಂಡಿದೆ.

ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕರ ಭೇಟಿ:

ನಿನ್ನೆ ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಮಧ್ಯಾಹ್ನ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿ-ಆಗುಂಬೆ ಬಂದ್ ಆಗಿದ್ದ ರಸ್ತೆಗೆ ಬಂದು ಜನರ ಯೋಗಕ್ಷೇಮ ವಿಚಾರಿಸಿದರು. ಅದೇ ರೀತಿ ಸೊರಬ ಶಾಸಕ ಕುಮಾರ್​ ಬಂಗಾರಪ್ಪ ಅವರು ಸಹ ಚಿಕ್ಕಶಕುನ, ಹಿರೆಶಕುನ ಗ್ರಾಮದ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ವರದ ನದಿ ಪ್ರವಾಹದಲ್ಲಿ ಸಿಲುಕಿದ ಕುಟುಂಬ ರಕ್ಷಣೆ:

ಸಾಗರ ತಾಲೂಕಿನ ಕಾನ್ಲೆ ಗ್ರಾಮ ಪಂಚಾಯತ್​ ವ್ಯಾಪ್ತಿಯ ಮಂಡಗಳಲೆ ಗ್ರಾಮದ ವಸಂತ ಹೆಗಡೆ ಅವರ ಕುಟುಂಬ ನೆರೆಯಲ್ಲಿ ಸಿಲುಕಿದ್ದು, ತಾಲೂಕು ಆಡಳಿತ ರಕ್ಷಣೆ ಮಾಡಿದೆ. ಇವರ ಮನೆಗೆ ಸುಮಾರು ನಾಲ್ಕು ಅಡಿಗಳಷ್ಟು ನೀರು ಬಂದ ಹಿನ್ನೆಲೆ ಬೋಟ್​ನಲ್ಲಿ ತೆರಳಿ, ಕುಟುಂಬದ ಸದಸ್ಯರು ಸೇರಿದಂತೆ ನಾಯಿಗಳನ್ನು ರಕ್ಷಣೆ ಮಾಡಲಾಗಿದೆ.

ಸ್ಥಳೀಯ ನಿವಾಸಿಗಳ ಸ್ಥಳಾಂತರ:

ತುಂಗಾ ಅಣೆಕಟ್ಟೆಯಿಂದ ನದಿಗೆ ಹೆಚ್ಚಿನ ನೀರು ಹರಿ ಬಿಡುತ್ತಿರುವುದರಿಂದ ಶಿವಮೊಗ್ಗದ ನದಿ ಪಾತ್ರದ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ. ರಾಜಕಾಲುವೆಯಿಂದ ನದಿಗೆ ಸೇರುವ ನೀರು ವಾಪಸ್ ಬರುವುದರಿಂದ ಅಕ್ಕ ಪಕ್ಕದ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ. ಮುಖ್ಯವಾಗಿ ಶಿವಮೊಗ್ಗ ಶಾಂತಮ್ಮ ಲೇಔಟ್, ಕುಂಬಾರಗುಂಡಿ, ಮೊಹಮ್ಮದ್ ನಗರ ಸೇರಿದಂತೆ ಇತರೆ ಭಾಗದ ಜನರನ್ನು ಗಂಜಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

ABOUT THE AUTHOR

...view details