ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ. ಪರಿಣಾಮ ನದಿ, ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ.
ಶಿವಮೊಗ್ಗದಲ್ಲಿ ಭಾರಿ ಮಳೆ: ಕೆರೆ ಏರಿ ಒಡೆದು ಭಾರಿ ಅವಾಂತರ, ಪ್ರವಾಹ ಭೀತಿ - ಮೈದುಂಬಿ ಹರಿಯುತ್ತಿದೆ ತುಂಗಾ ನದಿ
ಶಿವಮೊಗ್ಗ ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು, ರೈತರ ಹೊಲಕ್ಕೆ ನೀರು ನುಗ್ಗಿದೆ.
ಬೆಳೆಗೆ ನುಗ್ಗಿದ ನೀರು
ಶಿವಮೊಗ್ಗ ತಾಲೂಕಿನ ಹಾರ್ನಳ್ಳಿ ಹೋಬಳಿಯ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬಿ ಗಂಗಮ್ಮನ ಕೆರೆ ಏರಿ ಒಡೆದು ಸುಮಾರು 100 ಎಕರೆ ಮೆಕ್ಕೆಜೋಳದ ಗದ್ದೆಗೆ ಹಾಗೂ ತೋಟಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಸಂಪೂರ್ಣ ಬೆಳೆ ನೀರಿನಲ್ಲಿ ಮುಳುಗಿದ್ದು ರೈತರು ಆತಂಕದಲ್ಲಿದ್ದಾರೆ.
ಇನ್ನೊಂದೆಡೆ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ತುಂಗಾ ಜಲಾಶಯದಿಂದ ತುಂಗಾ ನದಿಗೆ 48,323 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಜೊತೆಗೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ಟಿಪ್ಪು ನಗರದಲ್ಲಿ ಮನೆಯೊಂದು ಕುಸಿದು ಬಿದ್ದಿದೆ.