ಚಿಕ್ಕಮಗಳೂರು :ಜಿಲ್ಲೆಯ ಮಲೆನಾಡು ಭಾಗದಲ್ಲಿ ಸತತ ಐದನೇ ದಿನವೂ ಧಾರಾಕಾರ ಮಳೆ ಮುಂದುವರೆದಿದೆ. ಜಿಲ್ಲೆಯ ಆಲ್ದೂರು, ಬಾಳೆಹೊನ್ನೂರು, ಕೊಪ್ಪ, ಮೂಡಿಗೆರೆ, ಜಯಪುರ, ಬಣಕಲ್, ಚಾರ್ಮಾಡಿ ಘಾಟ್ ಈ ಭಾಗದಲ್ಲಿ ನಿರಂತರ ಧಾರಾಕಾರ ಮಳೆ ಸುರಿಯುತ್ತಿದೆ. ವಾಹನ ಸಂಚಾರದಲ್ಲಿ ವ್ಯತ್ಯಯ ಕಂಡು ಬರುತ್ತಿದೆ. ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನ ಕಂಗಾಲಾಗಿದ್ದಾರೆ.
ಒಂದು ಕಡೆ ಮಲೆನಾಡು ಭಾಗದ ಜನರು ಬಿಸಿಲಿನ ತಾಪಮಾನಕ್ಕೆ ಕಂಗೆಟ್ಟಿದ್ದು, ಈ ಮಳೆ ತಂಪು ಉಂಟು ಮಾಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಾಫಿ ಬೆಳೆಗಾರರಲ್ಲಿ ಮಂದಹಾಸ ಉಂಟು ಮಾಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಲೆನಾಡು ಭಾಗದ ಹತ್ತಾರು ಹಳ್ಳಿಗಳಲ್ಲಿ ವಿದ್ಯುತ್ನಲ್ಲಿ ವ್ಯತ್ಯಯ ಕಂಡು ಬರುತ್ತಿದೆ.
ಮಳೆ, ಗಾಳಿಗೆ ಮರ ಬಿದ್ದು, ಮನೆ ಹಾಗೂ ವಾಹನ ಜಖಂ :ಶಿವಮೊಗ್ಗ ಜಿಲ್ಲೆಯಲ್ಲಿ ಸಂಜೆಯಾಗುತ್ತಲೆ ಭಾರಿ ಗಾಳಿ ಮಳೆಗೆ ಮರ ಬಿದ್ದು ಹಲವೆಡೆ ಹಾನಿ ಉಂಟಾಗಿದೆ. ಶಿವಮೊಗ್ಗ ನಗರದ ಮಿಳಘಟ್ಟದ ಮೂರನೇ ತಿರುವಿನ ಶಿವಣ್ಣ ಎಂಬುವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಂಚಿನ ಮನೆ ಜಖಂ ಆಗಿದೆ. ಮಳೆಯಿಂದಾಗಿ ಮನೆಯಲ್ಲಿ ಐದಾರು ಜನ ಇದ್ದರು. ಮರ ಬಿದ್ದ ಕಾರಣ ಮನೆಯ ಹಂಚುಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ.
ಇದೇ ರೀತಿ ಸಾಗರ ತಾಲೂಕು ಆನಂದಪುರಂನ ಬಳಿ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಇದರಿಂದ ರಸ್ತೆಯ ಪಕ್ಕದಲ್ಲಿ ನಿಂತಿದ್ದ ವಾಹನಗಳಿಗೆ ಹಾನಿಯಾಗಿದೆ. ಆನಂದಪುರಂನಿಂದ ರಿಪ್ಪನ್ಪೇಟೆಗೆ ಸಾಗುವ ಮಾರ್ಗದಲ್ಲಿ ಮರ ಬಿದ್ದಿದೆ. ಇದರಿಂದ ಕೆಲ ಕಾಲ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಶಿಕಾರಿಪುರದಲ್ಲಿ ಸುಮಾರು 40 ನಿಮಿಷ ಗುಡುಗು ಸಿಡಿಲಿನಿಂದ ಮಳೆ ಸುರಿದಿದೆ.