ಶಿವಮೊಗ್ಗ:ಆಊರಿನ ಜನರು ನಾಡಿಗೆ ವಿದ್ಯುತ್ ನೀಡುವ ಸಲುವಾಗಿ ಸಂತ್ರಸ್ತರಾದವರು. ವಿದ್ಯುತ್ ಉತ್ಪಾದನೆ ಕಾರಣದಿಂದ ರಾಜ್ಯದ ಅತಿದೊಡ್ಡ ಜಲಾಶಯ ಲಿಂಗನಮಕ್ಕಿ ನಿರ್ಮಿಸಿದಾಗ ಅಲ್ಲಿ ಮುಳುಗಡೆಯಾದವರನ್ನು ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿ ಅಭಯಾರಣ್ಯದಲ್ಲಿ ತಂದು ಬಿಡಲಾಗಿತ್ತು. ಆದರೆ ಅವರಿಗೆ ಮೂಲಸೌಕರ್ಯ ಒದಗಿಸಲು ಮಾತ್ರ ಯಾವುದೇ ಸರ್ಕಾರಗಳು ಕ್ರಮ ಕೈಗೊಳ್ಳಲೇ ಇಲ್ಲ. ಇದೀಗ ಈ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಸರ್ಕಾರ ಮುಂದಾಗಿದೆ.
ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿ ಹಳ್ಳಿ ಗ್ರಾಮಗಳಿಗೆ ಬಂದ ಸಂತ್ರಸ್ತರು ಇನ್ನೇನು ಇಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯ ಘೋಷಣೆಯಾಯಿತು. ಹೀಗಾಗಿ ಇವರಿಗೆ ಯಾವುದೇ ಮೂಲಸೌಕರ್ಯಗಳು ಸಿಗಲೇ ಇಲ್ಲ. ಕನಿಷ್ಟ ಪಕ್ಷ ವಿದ್ಯುತ್ ಸಂಪರ್ಕವನ್ನಾದರೂ ಕೊಡಿ ಎಂದು ಹಲವು ಹೋರಾಟ ನಡೆಸಿದರೂ ಫಲ ಸಿಕ್ಕಿರಲಿಲ್ಲ. ಅಭಯಾರಣ್ಯದ ಒಳಗೆ ವಿದ್ಯುತ್ ಲೈನ್ ಎಳೆಯಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಈವರೆಗೆ ಅರಣ್ಯ ಇಲಾಖೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿ ಹಳ್ಳಿ ಗ್ರಾಮದ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿತ್ತು.
ಯುಜಿ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ: ಅಭಯಾರಣ್ಯ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ ಎಳೆಯಲು ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ ಎಂಬುದು ತಿಳಿಯುತ್ತಿದ್ದಂತೆ ಶರಾವತಿ ಸಂತ್ರಸ್ತರು ಯುಜಿ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ನೀಡುವಂತೆ ಹೋರಾಟ ಆರಂಭಿಸಿದ್ದರು. ಕಳೆದ 10 ವರ್ಷಗಳಿಂದ ಶರಾವತಿ ಸಂತ್ರಸ್ತರು ನಡೆಸುತಿದ್ದ ಹೋರಾಟಕ್ಕೆ ಮಣಿದ ಕೇಂದ್ರ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಯುಜಿ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ನೀಡಲು ಅನುಮತಿ ನೀಡಿದೆ.