ಶಿವಮೊಗ್ಗ:ನಗರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಶೌಚಾಲಯಗಳ ನಿರ್ಮಾಣಕ್ಕಾಗಿ ಇದೇ ಮೊದಲ ಬಾರಿಗೆ ಸರ್ಕಾರ ₹ 14.61 ಕೋಟಿ ಅನುದಾನ ಒದಗಿಸಿದ್ದು, ಮೂರು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕುರಿತಾಗಿ ಅಧಿಕಾರಿಗಳು, ಮುಖ್ಯೋಪಾಧ್ಯಾಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯದ 86 ಶಾಲೆಗಳಲ್ಲಿ ಕೊಠಡಿ ದುರಸ್ತಿಗಾಗಿ ₹ 9.67 ಕೋಟಿ ಹಾಗೂ 47 ಶೌಚಾಲಯ ಬ್ಲಾಕ್‍ಗಳ ನಿರ್ಮಾಣಕ್ಕಾಗಿ ₹ 4.94 ಕೋಟಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಮೂರು ತಿಂಗಳಲ್ಲಿ ಹಂತ ಹಂತವಾಗಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಈ ಎಲ್ಲಾ ಶಾಲೆಗಳಿಗೆ ಅಗತ್ಯ ಪೀಠೋಪಕರಣ ಒದಗಿಸಲು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮುಂದೆ ಬಂದಿದೆ ಎಂದರು.
ಶಾಲೆಗಳ ದುರಸ್ತಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ನಡೆಯುವಂತೆ ಆಯಾ ಶಾಲಾಭಿವೃದ್ಧಿ ಸಮಿತಿ ನೋಡಿಕೊಳ್ಳಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಬಾರದು. ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳಿರಬೇಕು. ಸ್ವಚ್ಛತೆಗೆ ಆಯಾ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಸ್ಥಳೀಯವಾಗಿ ಸಂಪನ್ಮೂಲ ಕ್ರೋಢೀಕರಿಸಿ ಕ್ರಮ ಕೈಗೊಳ್ಳಬೇಕು. ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮಾಡಿಸಬಾರದು. ಒಂದು ವೇಳೆ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.
ರಜಾ ದಿನಗಳಲ್ಲಿ ಹಾಗೂ ಶಾಲಾ ಅವಧಿ ಬಳಿಕ ಶಾಲೆಗಳ ಆವರಣಗಳಲ್ಲಿ ಅನೈತಿಕ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು. ಈ ಕುರಿತು ಸೂಕ್ತ ನಿಗಾವಹಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಅಂತಹ ಕೃತ್ಯಗಳು ನಡೆಯುತ್ತಿದ್ದರೆ ನೇರವಾಗಿ ಎಸ್ಪಿಗೆ ದೂರು ನೀಡುವಂತೆ ತಿಳಿಸಿದ್ರು.