ಕರ್ನಾಟಕ

karnataka

ETV Bharat / city

Weekend Curfew : ಕರ್ಫ್ಯೂಗೆ ಹಲವೆಡೆ ಉತ್ತಮ ಸ್ಪಂದನೆ.. ಕೆಲವೆಡೆ ನಿಯಮ ಉಲ್ಲಂಘನೆ..

Weekend Curfew : ವೀಕೆಂಡ್​​ ಕರ್ಫ್ಯೂಗೆ ಹಲವೆಡೆ ಉತ್ತಮ ಸ್ಪಂದನೆ ಸಿಕ್ಕಿದ್ದರೆ, ಕೆಲವೆಡೆ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ..

Weekend Curfew in state
ರಾಜ್ಯದಲ್ಲಿ ವಾರಾಂತ್ಯದ ನಿಷೇಧಾಜ್ಞೆ

By

Published : Jan 8, 2022, 1:00 PM IST

Updated : Jan 8, 2022, 2:03 PM IST

ಕೋವಿಡ್​ ಹಾಗೂ ಒಮಿಕ್ರಾನ್​ ಹರಡದಂತೆ ಜನಸಂದಣಿ ನಿಯಂತ್ರಿಸಲು ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿದೆ. ವೀಕೆಂಡ್​​ ಕರ್ಫ್ಯೂಗೆ ಹಲವೆಡೆ ಉತ್ತಮ ಸ್ಪಂದನೆ ಸಿಕ್ಕಿದ್ದರೆ, ಕೆಲವೆಡೆ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಮದ್ದೇಬಿಹಾಳ, ಶಿವಮೊಗ್ಗ, ನೆಲಮಂಗಲ, ಮೈಸೂರು, ಚಾಮರಾಜನಗರ, ರಾಮನಗರದಲ್ಲಿನ ವೀಕೆಂಡ್​​ ಕರ್ಫ್ಯೂ ಹೀಗಿತ್ತು ನೋಡಿ..

ಕರ್ಫ್ಯೂಗೆ ಹಲವೆಡೆ ಉತ್ತಮ ಸ್ಪಂದನೆ..ಕೆಲವೆಡೆ ನಿಯಮ ಉಲ್ಲಂಘನೆ

ಮುದ್ದೇಬಿಹಾಳ :ಎರಡು ದಿನಗಳ ವಾರಾಂತ್ಯದ ಕರ್ಫ್ಯೂಗೆ ಮುದ್ದೇಬಿಹಾಳದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಜನಸಂಚಾರ ವಿರಳವಾಗಿದ್ದರೆ, ಮುಖ್ಯ ರಸ್ತೆಯಲ್ಲಿ ಅಂಗಡಿ-ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಪ್ರಮುಖವಾಗಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಆದ್ರೆ, ಕೆಲ ದ್ವಿಚಕ್ರವಾಹನ ಸವಾರರು ಕರ್ಫ್ಯೂ ಭೀತಿ ಇಲ್ಲದೇ ಸಂಚರಿಸುತ್ತಿರುವುದು ಕಂಡು ಬಂದಿತು. ನಾಲತವಾಡದಲ್ಲಿ ಬೈಕ್ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಶಿವಮೊಗ್ಗ :ಶಿವಮೊಗ್ಗದಲ್ಲಿ ವೀಕೆಂಡ್‌ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿನ್ನೆ ರಾತ್ರಿಯಿಂದಲೇ ಪೊಲೀಸರು ಅನಗತ್ಯ ವಾಹನ ಸಂಚಾರ ನಿಯಂತ್ರಿಸಿದ್ದಾರೆ. ಅಂಗಡಿ-ಮುಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಪೊಲೀಸರು ರಸ್ತೆಗಳಿಗೆ ಬ್ಯಾರಿಕೇಡ್​ಗಳನ್ನು ಹಾಕಿ ಅನಗತ್ಯ ಓಡಾಡುತ್ತಿರುವ ವಾಹನ ಸವಾರರಿಂದ ದಂಡ ವಸೂಲಿ ಮಾಡುತ್ತಿದ್ದಾರೆ. ಜೊತೆಗೆ ಅನಗತ್ಯ ಓಡಾಡದಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ನೆಲಮಂಗಲ :ತಾಲೂಕಿನ ಎ ಗ್ರೇಡ್ ಶ್ರೇಣಿಯ ಮುಜರಾಯಿ ಇಲಾಖೆಯ ರೈಲ್ವೆಗೊಲ್ಲಹಳ್ಳಿ(ಬೈರಶೆಟ್ಟಿಹಳ್ಳಿ)ಯ ಶ್ರೀ ಬೈಲಾಂಜನೇಯ ದೇವಾಲಯ, ಶಿವಗಂಗೆಯ ಹೊನ್ನಾದೇವಿ ದೇಗುಲ, ಗಂಗಾಧರೇಶ್ವರ ದೇವಾಲಯ, ದೇವರಹೊಸಹಳ್ಳಿಯ ಶ್ರೀ ಭದ್ರಕಾಳಮ್ಮ ದೇಗುಲ, ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಕಳೆದ ವರ್ಷ ಜುಲೈ ತಿಂಗಳನಲ್ಲಿ ದೇವಾಲಯಗಳು ಭಕ್ತರ ದರ್ಶನಕ್ಕೆ ಮುಕ್ತವಾಗಿತ್ತು. ಇಗ ಮತ್ತೊಮ್ಮೆ ಕೋವಿಡ್ ಹಾಗೂ ಒಮಿಕ್ರಾನ್ ಆತಂಕ ಎದುರಾಗಿ ದೇವಾಲಯ, ಪ್ರವಾಸಿ ಸ್ಥಳಗಳಿಗೆ ವಾರಂತ್ಯದಲ್ಲಿ ನಿಷೇಧ ಹೇರಲಾಗಿದೆ. ರೈಲ್ವೆಗೊಲ್ಲಹಳ್ಳಿಯ ಬೈಲಾಂಜನೇಯ ಎಂದೇ 200 ವರ್ಷಗಳಿಂದ ಪ್ರಸಿದ್ಧಿಯಾಗಿರುವ ದೇವಾಲಯದಲ್ಲಿ ಶನಿವಾರ ಮತ್ತು ಭಾನುವಾರ ಭಕ್ತರಿಗೆ ಅವಕಾಶವಿಲ್ಲ. ಧರ್ನುಮಾಸವಾದ್ದರಿಂದ ಬೆಳಗಿನ ಜಾವ ಅರ್ಚಕರು ಮಾತ್ರ ತೆರಳಿ ಧಾರ್ಮಿಕ ಕೈಂಕರ್ಯಗಳ ಭಾಗವಾಗಿ ಪೂಜಾ ವಿಧಿ-ವಿಧಾನ ನಡೆಸುತ್ತಾರೆ ಎಂದು ಪಾರುಪತ್ತೇದಾರ ಶ್ರೀನಿವಾಸ್ ತಿಳಿಸಿದ್ದಾರೆ.

ಚಾಮರಾಜನಗರ :ಚಾಮರಾಜನಗರದಲ್ಲಿ ಕರ್ಫ್ಯೂಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗುಂಪುಗೂಡಿ ಜನರು ಮಾತನಾಡುವುದು, ಅನಗತ್ಯ ಓಡಾಟ ನಡೆಸುವುದು ಸಾಮಾನ್ಯವಾಗಿದೆ. ನಗರದಲ್ಲಿ ದಿನಸಿ ಅಂಗಡಿಗಳ ಬಾಗಿಲು ಮುಚ್ಚಿದ್ದರೆ, ಸತ್ಯಮಂಗಲಂ ರಸ್ತೆಯಲ್ಲಿನ ಬಹುತೇಕ ಅಂಗಡಿಗಳು, ಟೀ ಶಾಪ್, ಬೇಕರಿಗಳ ಬಾಗಿಲು ತೆರೆದಿವೆ. ರಾಜಾರೋಷವಾಗಿ ವಹಿವಾಟು ನಡೆಸುತ್ತಿರುವುದು ಕಂಡು ಬಂದಿತು. ಕೋವಿಡ್​ ನಿಯಮ ಮರೆತು ಜನ ಓಡಾಡುತ್ತಿದ್ದರು. ಹೋಟೆಲ್​ಗಳಲ್ಲಿ ಪಾರ್ಸೆಲ್​​ಗಳಿಗಷ್ಟೇ ಅವಕಾಶ ಇರುವುದರಿಂದ ವೀಕೆಂಡ್​​ನಲ್ಲಿ ಭರ್ಜರಿ ವ್ಯಾಪಾರ ಮಾಡುತ್ತಿದ್ದ ಮಾಂಸಹಾರಿ ಹೋಟೆಲ್​ಗಳು ಸೇರಿದಂತೆ ಎಲ್ಲಾ ಬಗೆಯ ರೆಸ್ಟೋರೆಂಟ್​ಗಳು ವ್ಯಾಪಾರ ಇಲ್ಲದೇ ಭಣಗುಡುತ್ತಿದ್ದವು.

ರಾಮನಗರ :ರಾಮನಗರದ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಖಾಲಿ ಖಾಲಿಯಾರುವ ದೃಶ್ಯ ಕಂಡು ಬಂದಿದೆ. ಸ್ವಯಂ ಪ್ರೇರಿತರಾಗಿ ಮಾಲೀಕರೇ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದ್ದರು.‌ ಇದಲ್ಲದೇ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ವಿರಳವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪ್ರಮುಖ ಸರ್ಕಲ್​ಗಳಲ್ಲಿ ಪೊಲೀಸ್​​ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಇದನ್ನೂ ಓದಿ:'ಅವರನ್ನು ಹುಚ್ಚರಂತೆ ಬೀದಿ ಮೆರವಣಿಗೆ ಮಾಡಿಸುವೆ': ಕೊರಗಜ್ಜ ದೈವದ ನುಡಿ

Last Updated : Jan 8, 2022, 2:03 PM IST

ABOUT THE AUTHOR

...view details