ಶಿವಮೊಗ್ಗ :ವಿಧಾನಪರಿಷತ್ ಕಲಾಪದಲ್ಲಿಂದು ನಡೆದ ಘಟನೆ ಯಾರಿಗೂ ಶೋಭೆ ತರುವುದಿಲ್ಲ. ಇಂತಹ ಘಟನೆ ನಡೆಯಬಾರದು. ಈ ಘಟನೆ ಹಿರಿಯರ ಸದನದಲ್ಲಿ ನಡೆದಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಎಂದು ಮಾಜಿ ವಿಧಾನ ಪರಿಷತ್ ಸಭಾಪತಿ ಡಿ ಹೆಚ್ ಶಂಕರಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಜಿ ವಿಧಾನ ಪರಿಷತ್ ಸಭಾಪತಿ ಡಿ ಹೆಚ್ ಶಂಕರಮೂರ್ತಿ ವಿಧಾನ ಪರಿಷತ್ನಲ್ಲಿ ನಡೆದ ಗಲಾಟೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಾಪದಲ್ಲಿಂದು ನಡೆದ ಘಟನೆಗೆ ಕಾಂಗ್ರೆಸ್ನವರೇ ಕಾರಣ. ಕಾಂಗ್ರೆಸ್ನವರು ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಅಧಿಕಾರ ಇಲ್ಲದೇ, ಅಸಹನೆಯಿಂದಾಗಿ ಈ ತರಹ ಮಾಡುತ್ತಿರುವುದು ಸರಿಯಲ್ಲ.
ಓದಿ:ಸದನದ ಹೊರಗೆ ಪೊಲೀಸರು-ಮಾಧ್ಯಮವರ ನಡುವೆ ವಾಗ್ವಾದ
ಈ ಹಿಂದೆ ನಾನು ಸಭಾಪತಿಯಾಗಿದ್ದ ಸಂದರ್ಭದಲ್ಲಿ ಸಹ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಆ ಸಂದರ್ಭದಲ್ಲಿ ನಾನು ಬಹುಮತ ಸಾಬೀತುಪಡಿಸುವವರೆಗೂ ಸಭಾಪತಿ ಕುರ್ಚಿ ಮೇಲೆ ಕುಳಿತಿರಲಿಲ್ಲ.
ಇಂದು ಬಹುಮತವಿಲ್ಲದೇ ಸಭಾಪತಿಗಳು ನಡೆದುಕೊಂಡ ರೀತಿ ಸರಿಯಿಲ್ಲ. ಇಂತಹ ಘಟನೆಗಳಿಂದ ರಾಜ್ಯದ ಜನತೆ ರಾಜಕೀಯ ವ್ಯಕ್ತಿಗಳನ್ನು ನೋಡುವ ದೃಷ್ಟಿಕೋನ ಬೇರೆಯದಾಗುತ್ತದೆ ಎಂದರು.
ಕಾಂಗ್ರೆಸ್ ನಾಯಕರು ಅಧಿಕಾರ ನಡೆಸುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದುಕೊಂಡಿದ್ದಾರೆ. ನೆಹರು ಕುಟುಂಬದವರು ಹಾಗೂ ವಂಶಪಾರಂಪರ್ಯವಾಗಿ ಅಧಿಕಾರ ನಡೆಸಬೇಕು ಎಂಬ ಮನೋಭಾವ ಕಾಂಗ್ರೆಸ್ಸಿಗರದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.