ಶಿವಮೊಗ್ಗ: ನೆಹರು ಸಂತತಿ ಎಂದರೆ ಜಿನ್ನಾ ಸಂತತಿ ಇದ್ದಂಗೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶವನ್ನು ತುಂಡು ಮಾಡಿದ ಜನ ಇವತ್ತು ಭಾರತ್ ಜೋಡೋ ಎಂಬ ಕಾರ್ಯಕ್ರಮ ಮಾಡುತ್ತಿದ್ದಾರೆ. ಭಾರತ್ ಜೋಡೋ ಎನ್ನುವ ಪದ ಬಳಸಲು ಕಾಂಗ್ರೆಸ್ನವರಿಗೆ ಯೋಗ್ಯತೆಯಿಲ್ಲ ಎಂದರು.
ರಾಷ್ಟ್ರಭಕ್ತಿಯ ಬಗ್ಗೆ ಈಗಿನ ಕಾಂಗ್ರೆಸ್ನವರಿಗೆ ಕಲ್ಪನೆ ಇಲ್ಲ. ಹಿಂದಿನ ಕಾಂಗ್ರೆಸ್ಗೂ ಈಗಿನ ಕಾಂಗ್ರೆಸ್ಗೂ ವ್ಯತ್ಯಾಸ ಇದೆ. ನೆಹರು ಅವರು ಪಾಕಿಸ್ತಾನ, ಹಿಂದೂಸ್ತಾನ್, ಬಾಂಗ್ಲಾದೇಶ ಎಂದು ದೇಶವನ್ನು ಚುರುಚುರು ಮಾಡಿದ್ದಾರೆ. ನೆಹರು ವಂಶಸ್ಥರಾದ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಮಾಡ್ತಾರಂತೆ. ದೇಶ ತುಂಡು ಮಾಡಿದ ಇವರು ರಾಷ್ಟ್ರಭಕ್ತರೋ ಅಥವಾ ದೇಶದ್ರೋಹಿಗಳೊ ಎಂದು ದೇಶದ ಜನ ತೀರ್ಮಾನ ಮಾಡುತ್ತಾರೆ ಎಂದರು.
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸುದ್ದಿಗೋಷ್ಠಿ ಕಾಂಗ್ರೆಸ್ನ್ನು ದೇಶದ ಜನರು ಮೂಲೆಗುಂಪು ಮಾಡಿರುವ ಸಂದರ್ಭದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಈ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಆಗಿದ್ದ ವ್ಯಕ್ತಿಗೆ ಧ್ವಜದ ಬಣ್ಣ ಗೊತ್ತಿಲ್ಲ. ಕೆಂಪು ಬಿಳಿ ಹಸಿರೆಂದು ಹೇಳುವ ಪರಿಸ್ಥಿತಿ ಮಾಜಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರದ್ದು. ಕೇಸರಿ ಬದಲು ಕೆಂಪು ಎಂದು ಹೇಳಿದ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ನಮಗೆ ರಾಷ್ಟ್ರಭಕ್ತಿ ಹೇಳಿಕೊಡುವ ಅವಶ್ಯಕತೆ ಇಲ್ಲ. ಮಾಜಿ ಸಿಎಂ ಸೇರಿದಂತೆ ಕಾಂಗ್ರೆಸ್ ಪಕ್ಷದವರಿಗೆ ತ್ರಿವರ್ಣ ಧ್ವಜದ ಬಗ್ಗೆ ಅಭ್ಯಾಸ ಮಾಡಲಿ. ರಾಷ್ಟ್ರಧ್ವಜ ಯಾವ ಬಣ್ಣ?, ಅದರ ಪ್ರಾವಿತ್ಯತೆ ಏನು?, ಕೇಸರಿಗೂ ಕೆಂಪಿಗೂ ವ್ಯತ್ಯಾಸ ಏನು? ಈ ಬಗ್ಗೆ ಕಾಂಗ್ರೆಸ್ನವರಿಗೆ ಅರ್ಥವಾದರೆ ತ್ರಿವರ್ಣ ಧ್ವಜದ ಬಗ್ಗೆ ಗೌರವ ಬರುತ್ತದೆ. ತ್ರಿವರ್ಣ ಧ್ವಜದ ಬಗ್ಗೆ ಈಗಿನ ಕಾಂಗ್ರೆಸ್ ನಾಯಕರಿಗೆ ಯಾವುದೇ ಕಲ್ಪನೆ ಇಲ್ಲ. ವಿಧಾನಸಭೆ ಬಾವಿಗಿಳಿದು ಪ್ರತಿಭಟನೆ ಮಾಡುವ ಸಂದರ್ಭದಲ್ಲೂ ಧ್ವಜ ಬಳಕೆ ಮಾಡಿದ್ದವರು ನಮಗೆ ರಾಷ್ಟ್ರಭಕ್ತಿಯ ಬಗ್ಗೆ ಹೇಳಬೇಕಿಲ್ಲ ಎಂದು ಕಿಡಿಕಾರಿದರು.
ಎಸಿಬಿ ರದ್ದು ವಿಚಾರವಾಗಿ ಪ್ರತಿಕ್ರಿಸಿದ ಅವರು, ಅಂದಿನ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ಮುಚ್ಚಿಡಲು ಲೋಕಾಯುಕ್ತ ಸಂಸ್ಥೆ ಇದ್ದರೂ ಎಸಿಬಿ ತಂದಿದ್ದರು. ಕೋರ್ಟ್ ಇಂದು ಎಸಿಬಿ ರದ್ದು ಮಾಡಿ ಲೋಕಾಯುಕ್ತಕ್ಕೆ ಶಕ್ತಿ ನೀಡುವಂತೆ ಹೇಳಿದೆ. ಇದನ್ನು ನಮ್ಮ ಸರ್ಕಾರ ಸ್ವಾಗತಿಸುತ್ತದೆ ಎಂದರು.