ಶಿವಮೊಗ್ಗ: ರಾಜಕೀಯ ಅಲೆಮಾರಿಗಳನ್ನು ಪಕ್ಷಕ್ಕೆ ಕರೆತಂದು ನನನ್ನು ಬಗ್ಗಿಸುತ್ತೇನೆ ಎನ್ನುವುದನ್ನು ಮರೆತು ಬೀಡಿ ಎಂದು ಮಾಜಿ ಸಚಿವ ಕಿಮ್ಮನ್ನೆ ರತ್ನಾಕರ್ ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ದವೇ ಹರಿಹಾಯ್ದಿದ್ದಾರೆ.
ರಾಜಕೀಯ ಅಲೆಮಾರಿಗಳನ್ನ ಕರೆತಂದು ನನ್ನ ಬಗ್ಗಿಸುತ್ತೇವೆ ಎನ್ನುವುದನ್ನ ಮರೆತುಬಿಡಿ: ಕಿಮ್ಮನ್ನೆ ರತ್ನಾಕರ್ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಈ ಹೇಳಿಕೆಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಂಚಾಯತ್ ರಾಜ್ ವಿಭಾಗದ ಜಿಲ್ಲಾ ಮಟ್ಟದ ಸಭೆಯಲ್ಲಿ ಗೊಂದಲ, ಬಿಗುವಿನ ವಾತಾವರಣ ಉಂಟಾಯಿತು. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ವಿಭಾಗದಿಂದ ಜಿಲ್ಲಾ ಮಟ್ಟದ ಸಭೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ವಿಭಾಗ ರಾಜ್ಯಾಧ್ಯಕ್ಷ ಸಿ. ನಾರಾಯಣಸ್ವಾಮಿ ಮತ್ತು ರಾಜ್ಯ ಸಂಚಾಲಕರಾದ ವಿಜಯಸಿಂಗ್ ಹಾಗೂ ಕಾಂಗ್ರೆಸ್‌ನ ವೀಕ್ಷಕರು, ಎಐಸಿಸಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಗೆ ತಡವಾಗಿ ಬಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ವೇದಿಕೆಯಲ್ಲಿ ಭಾಷಣ ಮಾಡಿದರು.
'ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ನಿರಂತರ ಹೋರಾಟ':
ಈ ವೇಳೆ ಅವರು, ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಹೋರಾಟ ಹಮ್ಮಿಕೊಂಡು ಬಂದಿದೆ. ನಾನು ಕೂಡ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಸಂತ್ರಸ್ತರಿಗೆ ಭೂಮಿ ಹಕ್ಕು ಕೊಡಿಸಲು ಕಾಂಗ್ರೆಸ್ ಪಕ್ಷ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ. ಆದರೆ, ತಮ್ಮ ಅಸ್ತಿತ್ವಕ್ಕಾಗಿ, ಅಧಿಕಾರಕ್ಕಾಗಿ ಅನೇಕ ಪಕ್ಷಗಳಿಗೆ ಪಕ್ಷಾಂತರ ಮಾಡಿ ಈಗ ಶರಾವತಿ ಮುಳುಗಡೆ ಸಂತ್ರಸ್ತರ ಸಮಿತಿಯ ಬ್ಯಾನರ್ ಅಡಿಯಲ್ಲಿ ಜೆಡಿಎಸ್ ಮುಖಂಡರು ಮತ್ತು ಜೆಡಿಎಸ್ ಬಾವುಟದೊಂದಿಗೆ ಕೆಲವು ಕಾಂಗ್ರೆಸ್ ನಾಯಕರು ಹೋರಾಟದಲ್ಲಿ ಭಾಗವಹಿಸಿರುವುದು ಪಕ್ಷಕ್ಕೆ ಮುಜುಗರ ತಂದಿದೆ ಎಂದು ಮಂಜುನಾಥ್ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀಕಾಂತ್ ಅವರು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ. ನಮ್ಮ ಅಭ್ಯರ್ಥಿ ಪ್ರಸನ್ನ ಕುಮಾರ್ ಅವರ ವಿರುದ್ಧ ಸ್ಪರ್ಧಿಸಿದ್ದರು. ಅವರನ್ನು ಒಂದು ಕಾರ್ಯಕ್ರಮಕ್ಕೆ ಕರೆತಂದು ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದರು. ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳಸುವ ಕೆಲಸ ಮಾಡಿದ್ದೇನೆ. ರಾಜಕೀಯ ಅಲೆಮಾರಿಗಳನ್ನು ಕರೆತಂದು ನನ್ನನ್ನು ಮುಗಿಸುತ್ತೇನೆ ಅಂತ ಯಾರಾದರೂ ಭಾವಸಿದ್ದರೆ ಅದನ್ನು ಇವತ್ತೇ ಮರೆತುಬಿಡಿ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
'ಎಲ್ಲವನ್ನ ಕಳೆದುಕೊಳ್ಳಲು ಸಿದ್ಧವಾಗಿರುವ ಮನುಷ್ಯ ನಾನು':
ನನಗೆ ಹಣ, ಅಧಿಕಾರ ಬೇಕಾಗಿಲ್ಲ. ಎಲ್ಲವನ್ನು ಕಳೆದುಕೊಳ್ಳಲು ಸಿದ್ಧವಾಗಿದ್ದೇನೆ. ಹತ್ತು ಕಾರು, ಹತ್ತು ಸಂಸಾರ, ಹತ್ತು ಮನೆ ಕಟ್ಟಿಕೊಳ್ಳಬೇಕು ಎನ್ನುವ ಯಾವುದೇ ಆಸೆ ಇಲ್ಲ. ಎಲ್ಲವನ್ನು ಕಳೆದುಕೊಳ್ಳಲು ಸಿದ್ಧವಾಗಿರುವ ಮನುಷ್ಯ ನಾನು. ಹಣ ಮತ್ತು ಅಧಿಕಾರಕ್ಕಾಗಿ ಪಕ್ಷದಲ್ಲಿ ಇರುವವನು ನಾನಲ್ಲ. ನನ್ನನ್ನು ಮೆಟ್ಟಿನಿಂತವರನ್ನು ಗೆಲ್ಲಿಸುವ ಯೋಚನೆ ಮಾಡಿದ್ದರೆ ಅದನ್ನು ಇವತ್ತೇ ಬಿಟ್ಟುಬಿಡಿ ಎಂದು ರೇಗಿದರು. ನಾಳೆ ನಾನೊಂದು ಕಾರ್ಯಕ್ರಮ ಮಾಡುತ್ತೇನೆ. ರೇವಣ್ಣ ಅವರ ಮಗನನ್ನು ಕರೆಯುತ್ತೇನೆ. ಪಕ್ಷದ ಕಾರ್ಯಕರ್ತರು, ನಾಯಕರು ಆ ಕಾರ್ಯಕ್ರಮಕ್ಕೆ ಬರ್ತೀರಾ ಎಂದು ಪ್ರಶ್ನಿಸಿದರು.
ಅಧಿಕಾರಕ್ಕಾಗಿ ಊರೆಲ್ಲೆ ತಿರುಗುವಂತಹವರನ್ನು ಪಕ್ಷಕ್ಕೆ ಕರೆತಂದು ನಮಗೇಕೆ ಹಿಂಸೆ ಕೊಡುತ್ತೀರಾ? ಮೊದಲು ಕಾಂಗ್ರೆಸ್‌ನಲ್ಲೇ ಇದ್ದ ಮಂಜುನಾಥ್ ಗೌಡ ಕಾಂಗ್ರೆಸ ಪಕ್ಷ ಬಿಟ್ಟು ಹೋಗಿದ್ಯಾಕೆ? ನನ್ನನ್ನು ಸೋಲಿಸಲು ಹೋಗಿದ್ರಾ? ಜೆಡಿಎಸ್ ಪಕ್ಷಕ್ಕೆ ಹೋಗಲು ಕಾರಣವೇನು? ಪಕ್ಷದ ಸಿದ್ಧಾಂತ ಸರಿ ಇರಲಿಲ್ಲವಾ? ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಸರಿ ಇರಲಿಲ್ಲವಾ? ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸರಿ ಇರಲಿಲ್ಲವಾ? ಯಾರು ಸರಿ ಇರಲಿಲ್ವವಾ ಎಂದು ಪ್ರಶ್ನಿಸಿದರು.
ಈಗೊಂದು ಹೊಸ ಸುದ್ದಿ ಇದೆ. ಮತ್ತೆ ಕೆಜೆಪಿ ಪುನರ್ ಸ್ಥಾಪನೆ ಆಗ್ತಾ ಇದೆ. ಜೆಡಿಎಸ್ ಜೊತೆ ಸೇರಿಕೊಂಡು ಹೊಸತಾಗಿ ಪಕ್ಷ ಸಿದ್ಧವಾಗುತ್ತಿದ್ದೆ. ನಾನು ಇವರನ್ನು ಇಲ್ಲಿ ಕರೆದುಕೊಂಡು ತಿರುಗಾಡಿದ ಮೇಲೆ ಇವರು ಅಲ್ಲಿಗೆ ಹೋದರೆ ನಾವೇನು ಮಾಡೋಣ? ಬಂಗಾರಪ್ಪ ನನ್ನ ನಾಯಕರು ಎಂದು ಹೋದರು. ಕುಮಾರಸ್ವಾಮಿ ನನ್ನ ನಾಯಕರು ಎಂದು ಹೋದರು. ಯಾರೆಲ್ಲ ಮುಖ್ಯಮಂತ್ರಿಯಾದರೋ ಅವರೆಲ್ಲ ನಾಯಕರೆಂದು ಮಂಜುನಾಥ್ ಗೌಡ ಅವರ ಹಿಂದೆ ಹೋದರು. ಅವರನ್ನು ಈಗ ಪಕ್ಷಕ್ಕೆ ಕರೆತರಲಾಗಿದೆ. ನಾವು 35 ವರ್ಷದಿಂದ ಆಸ್ತಿ, ಮನೆ ಕಳೆದುಕೊಂಡು ಹೋರಾಟ ಮಾಡುತ್ತಿದ್ದೇವೆ. ಪಕ್ಷ ಸಂಘಟಿಸಿದ್ದೇವೆ ಎಂದು ಗುಡುಗಿದರು.
'ಪ್ರಪಂಚದ ಯಾವ ಶಕ್ತಿಯೂ ನನ್ನ ಕೊಂಡುಕೊಳ್ಳಲು ಆಗಲ್ಲ':
ಹೊಸದಾಗಿ ಪಕ್ಷಕ್ಕೆ ಬಂದವರು ಒಂದು ದಿನವೂ ಪ್ರಚಾರಕ್ಕೆ ಬರುವುದಿಲ್ಲ. ಒಂದು ವರ್ಷ ಇರುವಾಗ ಪಕ್ಷಕ್ಕೆ ಬಂದು ಪಾರ್ಟಿ ಕಟ್ಟುವುದು ಹೇಗೆ. ಪಾರ್ಟಿ ಕಟ್ಟುವರು ರಾತ್ರಿ ಹಗಲು ಕೆಲಸ ಮಾಡಬೇಕು. ಸಾಲ ಮಾಡಿ ಜನರಿಗೆ ದುಡ್ಡು ಕೊಟ್ಟಿದ್ದೇವೆ. ನನ್ನ ಮನೆ ಮಾರಿ ಸಾಲ ಕೊಟ್ಟಿದ್ದೇನೆ. ಈ ರಾಜಕೀಯ ಅಲೆಮಾರಿಗಳು ಬಂದು ನನ್ನ ಸೋಲಿಸುತ್ತೇವೆ ಎಂದು ಯೋಚನೆ ಮಾಡಿದ್ದರೆ, ಈ ಪ್ರಪಂಚದ ಯಾವ ಶಕ್ತಿಯು ನನ್ನನ್ನು ಕೊಂಡುಕೊಳ್ಳಲು ಆಗುವುದಿಲ್ಲ. ರಾಜಕೀಯ ಅಲೆಮಾರಿಗಳಿಗೆ ನೀವು ಸಪೋರ್ಟ್ ಮಾಡುವುದಾದರೆ ಹಂಡ್ರೆಡ್ ಪರ್ಸೆಂಟ್ ನಾನು ಸುಮ್ಮನಿರಲು ಆಗುವುದಿಲ್ಲ ಎಂದು ಕಿಮ್ಮನೆ ತಮ್ಮ ಆಕ್ರೋಶವನ್ನು ಹೋರಹಾಕಿದರು.
ನಾನು ಬರುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಒಬ್ಬರು ಕಳ್ಳರು ಬರ್ತಾರೆ ಅನ್ನೋದು ಗೊತ್ತಾಯ್ತು. ಅದಕ್ಕೆ ಬಂದೆ ಎಂದರು. ಯಾರೂ ಜೆಡಿಎಸ್‌ನವರನ್ನು ಕರೆದು ಕಾರ್ಯಕ್ರಮ ಮಾಡಿದ್ದಾರೆ ಅವರ ವಿರುದ್ಧ ನೀವು ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದರೆ ಎಲ್ಲಾ ಸಭೆಗೂ ಬರುತ್ತೇನೆ, ಪ್ರತಿಭಟನೆ ಮಾಡುತ್ತೇನೆ ಎಂದು ಪಕ್ಷದ ನಾಯಕರ ಎದುರೇ ಮಂಜುನಾಥ್ ಗೌಡರ ವಿರುದ್ಧ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಕೆಲವು ಪಂಚಾಯತ್ ಸದಸ್ಯರು ಎದ್ದು ನಿಂತು ನಾವು ಯಾವುದೇ ಚಿಹ್ನೆ ಇಲ್ಲದೇ ಗೆದ್ದು ಬಂದಿದ್ದೇವೆ. ನಾವು ಹಿಂದೆ ಜೆಡಿಎಸ್‌ನಲ್ಲಿದ್ದೆವು. ಈಗ ಕಾಂಗ್ರೆಸ್ ಪಕ್ಷಕ್ಕೆ ಬಂದು ನಿಷ್ಠಾವಂತರಾಗಿ ಪಕ್ಷದ ಕೆಲಸ ಮಾಡುತ್ತಿದ್ದೇವೆ. ರಾಜಕೀಯದಲ್ಲಿ ಪಕ್ಷಾಂತರ ಎನ್ನುವುದು ಸಾಮಾನ್ಯ. ಈಗ ಕಾಂಗ್ರೆಸ್ ಕಾರ್ಯಕರ್ತರಾಗಿರುವ ನಾವು ಅಲೆಮಾರಿಗಳೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಭಯ ನಾಯಕರ ಬೆಂಬಲಿಗರ ನಡುವೆ ವಾಗ್ವಾದ ಉಂಟಾಗಿ ಸಭೆಯಲ್ಲಿ ಭಾರೀ ಗೊಂದಲವಾಯಿತು. ವೇದಿಕೆ ಮೇಲಿದ್ದ ಆರ್.ಎಂ. ಮಂಜುನಾಥಗೌಡರಿಗೂ ಇರಿಸು ಮುರಿಸು ಉಂಟಾಯಿತು. ಅವರೇ ಸ್ವತಃ ವೇದಿಕೆ ಮೇಲೆ ಕೂರುವಂತೆ ಕಿಮ್ಮನೆ ಅವರಿಗೆ ಹೇಳಿದರೂ ಕೂಡ ಕಿಮ್ಮನೆ ರತ್ನಾಕರ್ ವೇದಿಕೆ ಮೇಲೆ ಕುಳಿತುಕೊಳ್ಳದೇ ಭಾಷಣ ಮುಗಿಸಿ ನಿರ್ಗಮಿಸಿದರು. ಕೆಲ ದಿನಗಳ ಹಿಂದೆ ಮಂಜುನಾಥ್ ಗೌಡರ ವಿರುದ್ಧ ಕಿಮ್ಮನ್ನೆ ರತ್ನಾಕರ್ ಪಕ್ಷದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದರು.