ಕರ್ನಾಟಕ

karnataka

By

Published : Mar 13, 2021, 7:00 AM IST

ETV Bharat / city

ರಾಷ್ಟ್ರದ ಗಮನಸೆಳೆಯಲಿರುವ ಶಿವಮೊಗ್ಗ: ಡಿ.ಆರ್.ಡಿ.ಓ ಪ್ರಯೋಗಾಲಯ ಸ್ಥಾಪನೆಗೆ ತಯಾರಿ

ಮುಂಬರುವ 2-3 ವರ್ಷಗಳಲ್ಲಿ ಶಿವಮೊಗ್ಗದ ಸಂಪೂರ್ಣ ಚಿತ್ರಣವೇ ಬದಲಾಗುವ ಎಲ್ಲಾ ನಿರೀಕ್ಷೆಗಳಿದ್ದು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್​ಮೆಂಟ್ ಆರ್ಗನೈಸೇಷನ್ ರಿಸರ್ಚ್ ಸೆಂಟರ್ ಮತ್ತು ಲ್ಯಾಬ್ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.

ಶಿವಮೊಗ್ಗದಲ್ಲಿ ಡಿ.ಆರ್.ಡಿ.ಓ ಪ್ರಯೋಗಾಲಯ ಸ್ಥಾಪನೆಗೆ ತಯಾರಿ
ಶಿವಮೊಗ್ಗದಲ್ಲಿ ಡಿ.ಆರ್.ಡಿ.ಓ ಪ್ರಯೋಗಾಲಯ ಸ್ಥಾಪನೆಗೆ ತಯಾರಿ

ಶಿವಮೊಗ್ಗ: ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆ ಮೂಲಕ ನಗರ ಪ್ರದೇಶ ಅಭಿವೃದ್ಧಿಗೊಳ್ಳುತ್ತಿದ್ದರೆ, ಇತ್ತ ಕೈಗಾರಿಕೆಗಳ ಸ್ಥಾಪನೆಗೆ ಸಹಕಾರಿಯಾಗುವಂತೆ ವಿಮಾನ ನಿಲ್ದಾಣ ಕೂಡ ನಿರ್ಮಾಣಗೊಳ್ಳುತ್ತಿದೆ. ಈ ನಡುವೆಯೇ ಶಿವಮೊಗ್ಗ ಜಿಲ್ಲೆ ಇದೀಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲು ಸಜ್ಜಾಗುತ್ತಿದೆ.

ಶಿವಮೊಗ್ಗದಲ್ಲಿ ಡಿ.ಆರ್.ಡಿ.ಓ ಪ್ರಯೋಗಾಲಯ ಸ್ಥಾಪನೆಗೆ ತಯಾರಿ

ಹೌದು, ಮುಂಬರುವ 2-3 ವರ್ಷಗಳಲ್ಲಿ ಶಿವಮೊಗ್ಗದ ಸಂಪೂರ್ಣ ಚಿತ್ರಣವೇ ಬದಲಾಗುವ ಎಲ್ಲಾ ನಿರೀಕ್ಷೆಗಳಿವೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ಶಿವಮೊಗ್ಗದಲ್ಲಿ ಡಿ.ಆರ್.ಡಿ.ಓ. ರಿಸರ್ಚ್ ಸೆಂಟರ್ ಮತ್ತು ಲ್ಯಾಬ್ ಸ್ಥಾಪನೆಗೆ ಎಲ್ಲಾ ತಯಾರಿ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಳ್ಳುತ್ತಿರುವ ಹಿನ್ನೆಲೆ ಶಿವಮೊಗ್ಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ನಿರೀಕ್ಷೆ ಹೊಂದಲಾಗಿದ್ದು, ಜಿಲ್ಲೆಯ ಫೌಂಡ್ರಿ ಉದ್ಯಮ ಏಷ್ಯಾದಲ್ಲಿಯೇ ವಿದೇಶಗಳಿಗೆ ವಿವಿಧ ಬಗೆಯ ವಾಹನಗಳು ಮತ್ತು ರೈಲುಗಳಿಗೆ ಬಿಡಿ ಭಾಗಗಳನ್ನು ಅತ್ಯಧಿಕವಾಗಿ ರಫ್ತು ಮಾಡುತ್ತಿದೆ ಎಂಬ ಹೆಗ್ಗಳಿಕೆ ಹೊಂದಿದೆ.

ಕಳೆದ 3 ವರ್ಷಗಳಿಂದ ಶಿವಮೊಗ್ಗ ಮತ್ತಷ್ಟು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಪಶ್ಚಿಮ ಘಟ್ಟಗಳಲ್ಲಿ ಯಥೇಚ್ಚವಾಗಿ ಲಭ್ಯವಿರುವ ಸಸ್ಯ ಪ್ರಭೇದಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ದೇಶದ ರಕ್ಷಣಾ ಪಡೆಯ ಒಳಿತಿಗಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲು ಪರಿಣಿತ ಮಾನವ ಸಂಪನ್ಮೂಲ‌ ಮಲೆನಾಡು ಭಾಗದಲ್ಲಿದೆ‌. ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಈ ಭಾಗದ ತಜ್ಞರ ಸಂಶೋಧನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಯೋಜಿಸಲಾಗಿದೆ. ಸ್ಥಳೀಯ ಮಾನವ ಸಂಪನ್ಮೂಲವನ್ನು ಮತ್ತು ಅವರ ಬುದ್ಧಿಮತ್ತೆಯನ್ನು ದೇಶದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ.

ಇನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಈ ಡಿ.ಆರ್.ಡಿ.ಓ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್​ಮೆಂಟ್ ಆರ್ಗನೈಸೇಷನ್) ರಿಸರ್ಚ್ ಸೆಂಟರ್ ಮತ್ತು ಲ್ಯಾಬ್ ಸ್ಥಾಪನೆ ಮಾಡುವಂತೆ ದೇಶದ ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದು, ಮಲೆನಾಡಿನಲ್ಲಿ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಯೋಗಾಲಯವನ್ನು ಯಾವ ರೀತಿ ರೂಪಿಸಬಹುದು ಎಂಬುದರ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲಾಗಿದೆ. ಜೊತೆಗೆ ಕೇಂದ್ರದ ಒಂದು ತಂಡ, ಕುವೆಂಪು ವಿವಿ ಗೆ ಭೇಟಿ ನೀಡಿ, ಆವರಣದ ಪರಿಶೀಲನೆ ಕೂಡ ನಡೆಸಿದೆ.

ಒಟ್ಟಿನಲ್ಲಿ ಡಿ.ಆರ್.ಡಿ.ಓ. ಪ್ರಯೋಗಾಲಯ ಸ್ಥಾಪನೆಗೆ ಮುಂದಾಗಿರುವುದರಿಂದ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೃಷಿ‌‌, ಇಂಜಿನಿಯರಿಂಗ್ ಮತ್ತಿತರೆ ವಿಷಯಗಳ‌ ಸಂಶೋಧಕರು, ವಿಜ್ಞಾನಿಗಳು ಕುವೆಂಪು ವಿವಿ ಆವರಣದಲ್ಲಿಯೇ ತಮ್ಮ ಗುರಿಯನ್ನು ಸಾಧಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ.

ABOUT THE AUTHOR

...view details