ಶಿವಮೊಗ್ಗ:ಆನೆ ಬಿಡಾರಗಳಲ್ಲಿ ತಾಯಿ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸುವ ವೀನಿಂಗ್ ಕಾರ್ಯ ಅತಿ ರೋಚಕ ಒಂದೆಡೆಯಾದರೆ, ಅಮ್ಮನನ್ನು ಬಿಟ್ಟಿರಲಾರದೆ ಮರಿಯಾನೆಯ ಗೋಳಾಟ ಕುರುಳು ಹಿಂಡುವಂತಿತ್ತು. ಆದರೆ ಸಂಪ್ರದಾಯವಾಗಿ ವೀನಿಂಗ್ ಕಾರ್ಯ ಇಲ್ಲಿ ಅನಿವಾರ್ಯವಾಗಿದೆ.
ರಾಜ್ಯದ ಪ್ರಮುಖ ಆನೆ ಬಿಡಾರಗಳಲ್ಲಿ ಒಂದಾದ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿಂದು ನೇತ್ರಾವತಿ ಆನೆಯಿಂದ ಅದರ ಮರಿಯಾನೆಯನ್ನು ಬೇರ್ಪಡಿಸುವ ವೀನಿಂಗ್ ಕಾರ್ಯ ನಡೆಯಿತು. ತಾಯಿ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸಿ, ಮರಿಯಾನೆಗೆ ಹೊಸ ಪ್ರಪಂಚ ಹಾಗೂ ಹೊಸ ಪಾಠಗಳನ್ನು ಕಲಿಸಲು ವೀನಿಂಗ್ ನಡೆಸಲಾಗುತ್ತದೆ. ನಂತರ ತಾಯಿ ಆನೆ ಹಾಗೂ ಮರಿಯಾನೆ ಬೇರೆ ಬೇರೆ ಇರುವಂತೆ ನೋಡಿಕೊಳ್ಳಲಾಗುತ್ತದೆ.
ನೇತ್ರಾವತಿ ಆನೆ ಹಾಗೂ ಮರಿಯಾನೆಯನ್ನು ಆನೆ ಬಿಡಾರದಿಂದ ದೂರ ಕಾಡಿನಲ್ಲಿ ಕಟ್ಟಲಾಗುತ್ತದೆ. ಅಲ್ಲಿ ತಾಯಿ ಆನೆಯನ್ನು ಮೊದಲು ಮರಕ್ಕೆ ಕಟ್ಟಲಾಗುತ್ತದೆ. ನಂತರ ಮರಿಯ ಮೂರು ಕಾಲುಗಳಿಗೆ ಹಗ್ಗದಿಂದ ಕಟ್ಟಲಾಗುತ್ತದೆ. ಕೊನೆಗೆ ಮರಿಯಾನೆಯ ಕುತ್ತಿಗೆಗೆ ಸೆಣಬಿನ ಹಗ್ಗದಿಂದ ಕಟ್ಟಿ ಅಲ್ಲಿಂದ ಆನೆಯನ್ನು ಬಿಡಾರದ ಇತರೆ ಆನೆಗಳ ಸಹಾಯದಿಂದ ಕಾಡಿನಿಂದ ಬಿಡಾರಕ್ಕೆ ಕರೆದು ಕೊಂಡು ಬರಲಾಗುತ್ತದೆ. ಇಂದಿನ ವೀನಿಂಗ್ ಕಾರ್ಯದಲ್ಲಿ ಸಾಗರ, ಆಲೆ, ಬಾಲಣ್ಣ, ಬಹದ್ದೂರ್, ಹೇಮವತಿ, ಕುಂತಿ, ಶಿವ ಎಂಬ ಆನೆಗಳು ಭಾಗಿಯಾಗಿದ್ದವು.