ಶಿವಮೊಗ್ಗ:ಮಂಗಳೂರು, ಉಡುಪಿಗೆ ಆದ ಗತಿ ಶಿವಮೊಗ್ಗ ಜಿಲ್ಲೆಗೂ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಭದ್ರಾವತಿಯಲ್ಲಿ ನಡೆದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದ ಕುರಿತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಶಿವಮೊಗ್ಗದಿಂದ ಹೋಗುತ್ತಿರುವ ಇರುವ ಸಂದೇಶದಿಂದ ಇಲ್ಲಿಗೆ ಬಂಡವಾಳ ಹಾಕಲು ಯಾರೂ ಬರಲ್ಲ. ಶಿವಮೊಗ್ಗದಲ್ಲಿ ಸಂವಿಧಾನಕ್ಕೆ, ರಾಷ್ಟ್ರ ಧ್ವಜಕ್ಕೆ ಅಪಮಾನವಾಗುತ್ತಿದೆ. ಮಂಗಳೂರು - ಉಡುಪಿಯಲ್ಲಿ ಇದೇ ರೀತಿ ನಡೆಯುತ್ತಿತ್ತು. ಇದರಿಂದ ಅಲ್ಲಿಗೆ ಬಂಡವಾಳ ಹಾಕಲು ಯಾರು ಬಾರದೇ, ಅವರೆಲ್ಲ ದುಬೈ ಸೇರಿದಂತೆ ಬೇರೆ ಬೇರೆ ಕಡೆ ಹೋಗಿ ಬಂಡವಾಳ ಹಾಕುವಂತಾಗಿದೆ. ಅದೇ ಗತಿ ಶಿವಮೊಗ್ಗಕ್ಕೂ ಬರಲಿದೆ. ಹೀಗಾಗಿ ಶಿವಮೊಗ್ಗ ಜನತೆ ಹುಷಾರಾಗಿರಿ. ನೀವು ಬದಲಾವಣೆ ತರದೇ ಹೋದರೆ, ವ್ಯಾಪಾರ ವಹಿವಾಟಿಗೆ ಯಾರು ಬರಲ್ಲ ಎಂದು ಎಚ್ಚರಿಸಿದರು.
ಬಿಜೆಪಿಯದು ಕಾಮಲೆ ಕಣ್ಣು:ಬಿಜೆಪಿಯದು ಕಾಮಲೆ ಕಣ್ಣು. ಅವರಿಗೆ ಎಲ್ಲವು ಹಳದಿಯಾಗಿ ಕಾಣುತ್ತದೆ. ನಮಗೆ ದೇಶದ, ರಾಜ್ಯದ ಅಭಿವೃದ್ದಿ ಬೇಕು. ಆದರೆ, ಬಿಜೆಪಿಯವರಿಗೆ ಮತ ಬೇಕಷ್ಟೆ. ಬಿಜೆಪಿಯವರು ತಮ್ಮ ಆಡಳಿತದ ಮೂಲಕ ರಾಜ್ಯದ ಮೇಲೆ ಕಪ್ಪು ಚುಕ್ಕೆ ಇಡುತ್ತಿದ್ದಾರೆ. ನಮ್ಮ ಸಮಾಜದಲ್ಲಿ ನಡೆಯುತ್ತಿದ್ದ, ಅನೇಕ ಆಚರಣೆ ಬದಲಾವಣೆ ಮಾಡಲು ಹೊರಟಿದ್ದಾರೆ.
ನಾವು ಏನ್ ತಿನ್ನಬೇಕು ಅಂತಾ ಬಿಜೆಪಿಯವರಿಗೆ ಕೇಳಬೇಕಿದೆ. ಯಾರು ಏನೇನೂ ಕಾಯಕ ಮಾಡುತ್ತಾರೋ ಅದನ್ನು ಅವರೇ, ಮಾಡಬೇಕು. ರಾಜ್ಯದಲ್ಲಿರುವುದು ಭ್ರಷ್ಟ ಸರ್ಕಾರ. ಈ ಸರ್ಕಾರವನ್ನು ಶೇ.40 ಸರ್ಕಾರ ಅಂತಾ ನಾವು ಕರೆದಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೇಳಿರುವುದು ಎಂದು ಕಿಡಿಕಾರಿದರು.