ಶಿವಮೊಗ್ಗ:ಏಳನೇ ಆರ್ಥಿಕ ಗಣತಿಯಲ್ಲಿ ವಾಣಿಜ್ಯ ಉದ್ಯಮಗಳ ಕುರಿತಾದ ಮಾಹಿತಿ ಸಮಂಜಸವಾಗಿಲ್ಲದ ಕಾರಣ, ಮತ್ತೆ ಗಣತಿ ಮಾಡಿ ಸರಿಪಡಿಸುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ 7ನೇ ಆರ್ಥಿಕ ಗಣತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. 7ನೇ ಆರ್ಥಿಕ ಗಣತಿಯಲ್ಲಿ ಕಳೆದ ಆರ್ಥಿಕ ಗಣತಿಗಿಂತ ವಾಣಿಜ್ಯ ಉದ್ಯಮಗಳು ಜಿಲ್ಲೆಯಲ್ಲಿ ಶೇ 1ರಷ್ಟು ಹೆಚ್ಚಾಗಿರುವುದನ್ನು ತೋರಿಸಿದ್ದರೂ, ವಾಣಿಜ್ಯ ಉದ್ಯಮಗಳಲ್ಲಿ ಇಳಿಕೆ ಕಂಡು ಬಂದಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆರ್ಥಿಕ ಗಣತಿಯನ್ನು ಕೈಗೊಳ್ಳಲಾಗಿದ್ದು, ಈ ಅಂಕಿ ಅಂಶಗಳನ್ನು ಮರುಪರಿಶೀಲಿಸಿ ಸರಿಪಡಿಸಬೇಕು. ಹಾಲು ಮಾರಾಟ ಸೇರಿದಂತೆ ಹೈನುಗಾರಿಕೆ, ಅಡಿಕೆ ಸುಲಿಯುವಿಕೆ, ಟೈಲರಿಂಗ್, ಕಂಟ್ರಾಕ್ಟರ್ ಕೆಲಸ, ಗೂಡಂಗಡಿ ಸೇರಿದಂತೆ ಸಣ್ಣಪುಟ್ಟ ಕಸುಬುಗಳನ್ನು ಸಹ ಆರ್ಥಿಕ ಗಣತಿಯಲ್ಲಿ ವಾಣಿಜ್ಯ ಉದ್ಯಮವಾಗಿ ಪರಿಗಣಿಸಬೇಕು ಎಂದು ಹೇಳಿದರು.