ಕರ್ನಾಟಕ

karnataka

ETV Bharat / city

ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ನೇರ ಅಕ್ಕಿ, ಬೇಳೆ ವಿತರಣೆ : ಜ್ಯೋತಿ ಎಸ್.ಕುಮಾರ್ - KDP meeting news shivmogga

ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಆಗಸ್ಟ್ ತಿಂಗಳಲ್ಲಿ ಶೇ.21, ಸೆಪ್ಟಂಬರ್‌ನಲ್ಲಿ ಶೇ.19 ಇದ್ದ ಸೋಂಕಿನ ಪ್ರಮಾಣ ಇಂದು ಶೇ.2ಕ್ಕೆ ಇಳಿದಿದೆ. ಪರೀಕ್ಷೆಗೆ ಒಳಪಡಿಸುವ 100 ಜನರಲ್ಲಿ 1.61 ಮಂದಿಗೆ ಸೋಂಕು ಕಂಡು ಬರುತ್ತಿದೆ..

Shimoga
ಕೆಡಿಪಿ ಸಭೆ

By

Published : Nov 10, 2020, 8:30 PM IST

ಶಿವಮೊಗ್ಗ :ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಈ ಸಾಲಿನಲ್ಲಿ 108 ದಿನಗಳ ಅವಧಿಯ ಅಕ್ಕಿ ಮತ್ತು ಬೇಳೆಯನ್ನು ನೇರವಾಗಿ ವಿತರಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಸಭೆ

ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಪ್ರಸ್ತುತ 53 ದಿನಗಳ ಅವಧಿಯ ರೇಶನ್ ಸರಬರಾಜಾಗಿದ್ದು, ತಲಾ ವಿದ್ಯಾರ್ಥಿಗೆ ಪ್ರತಿದಿನಕ್ಕೆ 100 ಗ್ರಾಂ ಅಕ್ಕಿ ಮತ್ತು 37 ಗ್ರಾಂ ಬೇಳೆಯಂತೆ ಒಂದೇ ಕಂತಿನಲ್ಲಿ ಇಂದಿನಿಂದ ವಿದ್ಯಾರ್ಥಿಗಳಿಗೆ ವಿತರಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಡಿಸೆಂಬರ್‌ನಿಂದ ಶಾಲೆ ಆರಂಭ ಸಾಧ್ಯತೆ :ಪ್ರೌಢಶಾಲೆ ಆರಂಭಿಸುವ ಕುರಿತಾಗಿ ವಿವಿಧ ಹಂತಗಳಲ್ಲಿ ಈಗಾಗಲೇ ಚರ್ಚೆ ನಡೆದಿದೆ. ಡಿಸೆಂಬರ್ ತಿಂಗಳಿನಿಂದ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ. ಸರ್ಕಾರ ಈ ಕುರಿತು ಮಾರ್ಗಸೂಚಿಯನ್ನು ಸಹ ಹೊರಡಿಸಿದೆ.

ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಶೇ.98ರಷ್ಟು ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದಾಖಲಾತಿಯಲ್ಲಿ ಶೇ.100ರಷ್ಟು ಹೆಚ್ಚಳ ಉಂಟಾಗಿದೆ. ಪಠ್ಯಪುಸ್ತಕ ಪೂರ್ಣ ಪ್ರಮಾಣದಲ್ಲಿ ಸರಬರಾಜಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ್ ಅವರು ಮಾಹಿತಿ ನೀಡಿದರು.

ಟ್ಯಾಬ್ ವಿತರಣೆ :ಖಾಸಗಿ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಟ್ಯಾಬ್ ವಿತರಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ತಲಾ ಒಂದುರಂತೆ ಜಿಲ್ಲೆಯಲ್ಲಿ 4,800 ಟ್ಯಾಬ್‌ಗಳನ್ನು ವಿತರಿಸಲಾಗುವುದು. ಸಿಲೆಬಸ್ ಬಳಿಕ ಟ್ಯಾಬ್ ಅನ್ನು ಮತ್ತೆ ಶಾಲೆಗೆ ವಿದ್ಯಾರ್ಥಿಗಳು ಹಿಂತಿರುಗಿಸಬೇಕಾಗುವುದು. ಜಿಲ್ಲೆಯಲ್ಲಿ ಶೇ.12 ರಿಂದ 13ರಷ್ಟು ವಿದ್ಯಾರ್ಥಿಗಳ ಮನೆಯಲ್ಲಿ ಟಿವಿ ಇಲ್ಲದಿರುವುದು ಸಮೀಕ್ಷೆ ಮೂಲಕ ತಿಳಿದು ಬಂದಿದೆ ಎಂದರು.

ಕೋವಿಡ್ ನಿಯಂತ್ರಣ :ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ ಪ್ರಕರಣ ಇಳಿಮುಖವಾಗಿವೆ. ಒಟ್ಟು 20,803 ಸೋಂಕಿತ ಪ್ರಕರಣಗಳ ಪೈಕಿ 20,243 ಜನರು ಗುಣಮುಖರಾಗಿದ್ದಾರೆ. ಹಾಲಿ 213 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟು 347 ಮಂದಿ ಮರಣ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3,155 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದ್ದು, 152 ತೀವ್ರ ನಿಗಾ ಘಟಕದ ಬೆಡ್‌ಗಳು ಹಾಗೂ 658 ಆ್ಯಕ್ಸಿಜನ್ ಬೆಡ್‌ಗಳಿವೆ. 76 ವೆಂಟಿಲೇಟರ್‌ಗಳು ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ತಿಳಿಸಿದರು.

ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಆಗಸ್ಟ್ ತಿಂಗಳಲ್ಲಿ ಶೇ.21, ಸೆಪ್ಟಂಬರ್‌ನಲ್ಲಿ ಶೇ.19 ಇದ್ದ ಸೋಂಕಿನ ಪ್ರಮಾಣ ಇಂದು ಶೇ.2ಕ್ಕೆ ಇಳಿದಿದೆ. ಪರೀಕ್ಷೆಗೆ ಒಳಪಡಿಸುವ 100 ಜನರಲ್ಲಿ 1.61 ಮಂದಿಗೆ ಸೋಂಕು ಕಂಡು ಬರುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಬೆಳೆ ವಿಮೆ ಮಂಜೂರು :2019ನೇ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಜಿಲ್ಲೆಯ 8,950 ರೈತರಿಗೆ ಬೆಳೆವಿಮೆ ಮಂಜೂರಾಗಿದ್ದು, ಒಟ್ಟು 8.56ಕೋಟಿ ರೂ. ಒಂದು ವಾರದ ಒಳಗಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 3,796 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದ್ದು, ಪರಿಹಾರ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್ ಅವರು ತಿಳಿಸಿದರು.

ಪ್ರಸಕ್ತ ಮುಂಗಾರಿನಲ್ಲಿ 234 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯುಂಟಾಗಿದೆ. ಕಳೆದ ಸಾಲಿಗೆ ಸಂಬಂಧಿಸಿದಂತೆ 21,414 ರೈತರಿಗೆ 25.94ಕೋಟಿ ರೂ. ಬೆಳೆ ವಿಮೆ ಮೊತ್ತವನ್ನು ಪಾವತಿಸಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ರಾಮಚಂದ್ರ ಮಡಿವಾಳ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀರಭದ್ರಪ್ಪ ಪೂಜಾರ್, ಸುರೇಶ್ ಸ್ವಾಮಿರಾವ್, ರೇಣುಕಾ ಹನುಮಂತಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details