ಕರ್ನಾಟಕ

karnataka

ETV Bharat / city

22 ವರ್ಷಗಳ ಬಳಿಕ ಭಕ್ತರಿಗೆ ಸಿಕ್ತು 'ಪಚ್ಚೆಲಿಂಗ' ದರ್ಶನಭಾಗ್ಯ, ಇಂದು ಮಾತ್ರ! - ಕೆಳದಿ ಸಂಸ್ಥಾನ

ಶಿವಮೊಗ್ಗದ ಎಸ್​ಬಿಐ ಬ್ಯಾಂಕ್ ಲಾಕರ್​ನಲ್ಲಿದ್ದ 'ಪಚ್ಚೆಲಿಂಗ', ಇಂದು ಭಕ್ತರ ದರ್ಶನಕ್ಕೆ ಸಿಕ್ಕಿತು. ಸುಮಾರು 22 ವರ್ಷಗಳ ಬಳಿಕ ಬೇಡಿಕೆಯ ಮೇರೆಗೆ ಭಕ್ತರಿಗೆ ಪಚ್ಚೆಲಿಂಗದ ದರ್ಶನವಾಗಿದ್ದು, ಈ ದರ್ಶನ ಇಂದು ಮಾತ್ರ ಭಕ್ತರಿಗೆ ಲಭ್ಯ. ಇಂದು ರಾತ್ರಿ ಮತ್ತೆ ಪಚ್ಚೆಲಿಂಗವನ್ನು ಪುನಃ ತಾಲೂಕು ಆಡಳಿತದ ಮೂಲಕ ಬ್ಯಾಂಕ್ ಲಾಕರ್​ಗೆ ವಾಪಸ್ ನೀಡಲಾಗುತ್ತಿದೆ. ಯಾಕೆ ಹೀಗೆ! ಈ ಸ್ಟೋರಿ ನೋಡಿ.

22 ವರ್ಷಗಳ ಬಳಿಕ ಭಕ್ತರಿಗೆ ಸಿಕ್ತು 'ಪಚ್ಚೆಲಿಂಗ' ದರ್ಶನಭಾಗ್ಯ

By

Published : Oct 8, 2019, 11:59 PM IST

ಶಿವಮೊಗ್ಗ: 22 ವರ್ಷಗಳ ಕಾಲ ಬ್ಯಾಂಕ್ ಲಾಕರ್​ನಲ್ಲಿ ಬಂಧಿಯಾಗಿದ್ದ ಬಹಳ ಅಪರೂಪದ 'ಪಚ್ಚೆಲಿಂಗ' ಇಂದು ಭಕ್ತರ ದರ್ಶನಕ್ಕೆ ಲಭ್ಯವಾಗಿದೆ.

ಸಾಗರ ತಾಲೂಕು ಬಂದೆಗದ್ದೆಯ ಕೆಳದಿ ಸಂಸ್ಥಾನದ ರಾಜಗುರು ಹಿರೆಮಠಕ್ಕೆ, ಕೆಳದಿಯ ರಾಣಿ ಚೆನ್ನಮ್ಮಾಜಿ ಪೂಜೆ ಮಾಡಲು ಪಚ್ಚೆಲಿಂಗವನ್ನು ನೀಡಿದ್ದರು ಎಂಬುದು ಇತಿಹಾಸ. ನೂರಾರು ವರ್ಷಗಳ ಕಾಲ ಮಠದಲ್ಲೇ ಇದ್ದ ಪಚ್ಚೆಲಿಂಗ, ಮಠದ ವಿವಾದದಿಂದಾಗಿ ಶಿವಮೊಗ್ಗದ ಎಸ್​ಬಿಐ ಬ್ಯಾಂಕ್ ಲಾಕರ್​ನಲ್ಲಿದೆ.

ಈ ಪಚ್ಚೆಲಿಂಗ ಸುಮಾರು ಅರ್ಧ ಅಡಿ ಎತ್ತರವಿದ್ದು, ಸಂಪೂರ್ಣ ಪಚ್ಚೆಕಲ್ಲಿನಿಂದ ಕೂಡಿದೆ. ಇದನ್ನು ರಾಣಿ ಚೆನ್ನಮ್ಮಾಜಿ ಪ್ರತಿ ವರ್ಷ ವಿಜಯದಶಮಿ ದಿನದಂದು ಪೂಜೆ ಮಾಡಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಂಡು ಇರಬೇಕು ಎಂದು ಆದೇಶ ಮಾಡಿದ್ದರು. ಆದ್ರೆ, ಮಠದ ಸ್ವಾಮೀಜಿಗಳ ಅಂತರಿಕ ಕಲಹದಿಂದಾಗಿ ಪಚ್ಚೆಲಿಂಗ ಈಗ ಬ್ಯಾಂಕ್ ಲಾಕರ್ ಸೇರುವಂತಾಗಿದೆ. ಇಂತಹ ಅಪರೂಪದ ಲಿಂಗವನ್ನು ಇಂದು ಹಿರೆಮಠಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿ, ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

22 ವರ್ಷಗಳ ಬಳಿಕ ಭಕ್ತರಿಗೆ ಸಿಕ್ತು 'ಪಚ್ಚೆಲಿಂಗ' ದರ್ಶನಭಾಗ್ಯ

ಸಾಗರ ಶಾಸಕ ಹರತಾಳು ಹಾಲಪ್ಪನವರಿಗೆ ಹಿರೆಮಠದ ಭಕ್ತರು ಪಚ್ಚೆಲಿಂಗ ದರ್ಶನ ಮಾಡಿಸುವಂತೆ ವಿನಂತಿಸಿಕೊಂಡ ಮೇರೆಗೆ, ಶಾಸಕರು ಸಿಎಂ ಯಡಿಯೂರಪ್ಪ ಬಳಿ ಭಕ್ತರ ನಿಯೋಗ ಕರೆದುಕೊಂಡು ಹೋಗಿದ್ದಾರೆ. ಸಿಎಂ ಆದೇಶದ ಮೇರೆಗೆ, ಶಿವಮೊಗ್ಗದಲ್ಲಿ ಬ್ಯಾಂಕ್​ ಲಾಕರ್​ನಲ್ಲಿದ್ದ ಲಿಂಗವನ್ನು ಜಿಲ್ಲಾಡಳಿತದ ಮೂಲಕ ಸಾಗರ ತಾಲೂಕು ಆಡಳಿತಕ್ಕೆ ನೀಡಿ, ಸಾಗರದ ಉಪಖಜಾನೆ ಮೂಲಕ ಮಠಕ್ಕೆ ತೆಗೆದುಕೊಂಡು ಹೋಗಲಾಯ್ತು. ಅಲ್ಲಿಂದ ಮೆರವಣಿಗೆ ಮೂಲಕ ಮಠಕ್ಕೆ ತೆಗೆದುಕೊಂಡು ಹೋಗಲಾಗಿದೆ. ಮಠದಲ್ಲಿ ಪಚ್ಚೆಲಿಂಗಕ್ಕೆ ಆರತಿ ಮೂಲಕ ಸ್ವಾಗತ ಕೋರಲಾಯ್ತು. ಮಠದ ಪೀಠಾಧಿಪತಿ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಲಿಂಗ ಪೂಜೆ ನೆರವೇರಿಸಿದರು. ನಂತರ ಭಕ್ತರಿಗೆ ಲಿಂಗ ದರ್ಶನಕ್ಕೆ ಅನುವು ಮಾಡಿ ಕೊಡಲಾಯಿತು. 22 ವರ್ಷಗಳ ನಂತರ ಅಪರೂಪದ ಪಚ್ಚೆಲಿಂಗದ ದರ್ಶನ ಪಡೆದ ಭಕ್ತರು ಸಂತಸಪಟ್ಟರು.

ಈ ದರ್ಶನ ಇಂದು ಮಾತ್ರ ಭಕ್ತರಿಗೆ ಲಭ್ಯ. ಇಂದು ರಾತ್ರಿ ಮತ್ತೆ ಪಚ್ಚೆಲಿಂಗವನ್ನು ಪುನಃ ತಾಲೂಕು ಆಡಳಿತದ ಮೂಲಕ ಬ್ಯಾಂಕ್ ಲಾಕರ್​ಗೆ ವಾಪಸ್ ನೀಡಲಾಗುತ್ತದೆ.

ABOUT THE AUTHOR

...view details