ಶಿವಮೊಗ್ಗ: ದೋಷಪೂರಿತ ತೂಕ ಮತ್ತು ಅಳತೆ ಪರಿಕರಗಳನ್ನು ಬಳಸುವುದು, ತೂಕ ಮತ್ತು ಅಳತೆಯಲ್ಲಿ ವಂಚಿಸುವುದು, ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದ ವ್ಯಾಪಾರಿ ಸಂಸ್ಥೆಗಳನ್ನು ಗುರುತಿಸಿ 913 ಮೊಕದ್ದಮೆ ದಾಖಲಿಸಲಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎಸ್. ಮಂಜುನಾಥ್ ಅವರು ತಿಳಿಸಿದ್ದಾರೆ.
2020ರ ಏಪ್ರಿಲ್‍ನಿಂದ 2021 ಜನವರಿವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ 1,868 ವ್ಯಾಪಾರಸ್ಥರ ಹಾಗೂ ಕೈಗಾರಿಕಾ ಕೇಂದ್ರಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಲಾಗಿದೆ. ಇದಲ್ಲದೆ ವ್ಯಾಪಾರ, ವ್ಯವಹಾರ ನಡೆಸುವವರು ಬಳಸುವ ತೂಕ ಮತ್ತು ಅಳತೆ ಪರಿಕರಗಳ ಸತ್ಯಾಪನೆ ನಡೆಸಿ 1,05,26,436 ರೂಪಾಯಿ ಶುಲ್ಕ ವಸೂಲಿ ಮಾಡಲಾಗಿದೆ. ವಂಚನೆ ಆರೋಪದಲ್ಲಿ ದಾಖಲಾದ ಮೊಕದ್ದಮೆಗಳ ಪೈಕಿ 911 ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಿ, ತಪ್ಪಿತಸ್ಥರಿಂದ 15,97,200ರೂ. ದಂಡ ವಸೂಲಿ ಮಾಡಲಾಗಿದೆ.