ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ಅರಣ್ಯ ವಲಯದ ಸಸ್ಯ ಕ್ಷೇತ್ರದಲ್ಲಿ ಸಸಿ ಬೆಳೆಸುವ ಹಾಗೂ ನಡುತೋಪು ನಿರ್ಮಿಸುವ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಚಾರದ ಕುರಿತು ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಸತ್ರ ಹಾಗೂ ಜಿಲ್ಲಾ ಪ್ರಧಾನ ನ್ಯಾಯಾಲಯವು ಭ್ರಷ್ಟಚಾರ ನಿಗ್ರಹ ದಳಕ್ಕೆ ಆದೇಶ ಮಾಡಿದೆ.
ಸರ್ಕಾರ ಅರಣ್ಯವನ್ನು ಬೆಳೆಸುವ, ಪೋಷಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಸಾಕಷ್ಟು ಅನುದಾನವನ್ನು ನೀಡುತ್ತದೆ. ಇಲ್ಲಿ ಅರಣ್ಯ ಇಲಾಖೆಯ ಡಿಎಫ್ಒ, ಆರ್ಎಫ್ಒ ಸೇರಿದಂತೆ ಎಲ್ಲಾ ಪ್ರಮುಖ ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿ ಸರ್ಕಾರದ ನಿಯಮವನ್ನ ಗಾಳಿಗೆ ತೂರಿ ಭ್ರಷ್ಟಚಾರ ಎಸಗಿದ್ದಾರೆ. ಸಸ್ಯ ಕ್ಷೇತ್ರದಲ್ಲಿ ಸಸಿ ಬೆಳೆಸುವ, ನಡು ತೋಪು ನಿರ್ಮಿಸುವ ಮತ್ತು ಪೋಷಿಸುವ ಕಾಮಗಾರಿಗಳಿಗಾಗಿ ಸರ್ಕಾರ ಪ್ರತ್ಯೇಕವಾಗಿ ಪ್ರತಿ ವರ್ಷ ಕೋಟ್ಯಾಂತರ ರೂ. ಬಿಡುಗಡೆ ಮಾಡುತ್ತದೆ. ಸಸ್ಯ ಕ್ಷೇತ್ರದಲ್ಲಿ ಸಸಿಗಳನ್ನು ಬೆಳೆಸಲಾಗುತ್ತದೆ. ಅಲ್ಲದೆ, ಗೊಬ್ಬರ, ಮಣ್ಣು ಸೇರಿದಂತೆ ವಿವಿಧ ಕೆಲಸಗಳಿಗೆ ಟೆಂಡರ್ ಕರೆದು ಅರ್ಹ ಗುತ್ತಿಗೆದಾರನಿಗೆ ಕೆಲ್ಸ ನೀಡಬೇಕಿದೆ. ಅಲ್ಲದೆ ಕಾಡಿನಲ್ಲಿ ನಡು ತೋಪು ನಿರ್ಮಾಣಕ್ಕೆ ಇದೇ ಸಸ್ಯ ಕ್ಷೇತ್ರದ ಸಸಿಗಳನ್ನು ಬಳಸಬೇಕು ಎಂಬ ನಿಯಮವಿದೆ. ಇವೆಲ್ಲವನ್ನು ಗಾಳಿಗೆ ತೋರಿ, ಅಧಿಕಾರಿಗಳು ಟೆಂಡರ್ ಕರೆಯದೆ ತಾವೇ ಅಕ್ರಮವಾಗಿ ಕಾಮಗಾರಿ ನಡೆಸಿ, ಕೋಟ್ಯಾಂತರ ರೂ.ಗಳನ್ನು ಗುಳಂ ಮಾಡಿದ್ದಾರೆ.
ಭದ್ರಾವತಿ ಅರಣ್ಯ ವಲಯದ ಕಾಮಗಾರಿಯಲ್ಲಿ ಭ್ರಷ್ಟಚಾರ ಆರೋಪ ಒಂದು ಕಡೆ ಕಾಮಗಾರಿ ನಡೆಸದೆ ಹಣವನ್ನು ಗುಳುಂ ಮಾಡಿದ್ರೆ, ಇನ್ನೂಂದು ಕಡೆ ಮಾಡಿರುವ ಕಾಮಗಾರಿ ಕಳಪೆಯಿಂದ ಕೂಡಿದೆ. ಅರಣ್ಯದಲ್ಲಿ ಸಿಗುವ ಮರಳು ಹಾಗೂ ಮಣ್ಣನ್ನು ಪಡೆದು ಹೊರಗಡೆಯಿಂದ ಖರೀದಿ ಮಾಡಿರುವುದಾಗಿ ನಕಲಿ ಬಿಲ್ ಸೃಷ್ಟಿಸಿದವರ ವಿರುದ್ದ ಕೇಸು ದಾಖಲಿಸಲಾಗಿತ್ತು.
ಅರಣ್ಯ ಸಂರಕ್ಷಣೆಗೆ ಬೇಲಿಗಳನ್ನು ನಿರ್ಮಾಣ ಮಾಡಲಾಗಿದ್ದು, ಅದು ಅಕ್ರಮದಿಂದ ಕೂಡಿದೆ. ಇಲ್ಲಿ ಸರಿಯಾದ ಬೇಲಿ ನಿರ್ಮಿಸದೆ ಒಂದೇ ವರ್ಷದಲ್ಲಿ ಬಿದ್ದು ಹೋಗುತ್ತಿವೆ. ಮೇಲಿನ ಎಲ್ಲಾ ಕಾಮಗಾರಿ ಪ್ರಗತಿಯಲ್ಲಿ ಇದೆ ಎಂದು ಪ್ರತಿ ವರ್ಷ ಬಿಲ್ ಮಾಡಿ ಹಣವನ್ನು ಲೂಟಿ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿದವರ ಮೇಲೆ ಇಲಾಖೆಯ ಅಧಿಕಾರಿಗಳು ಅಕ್ರಮ ಅರಣ್ಯ ಪ್ರವೇಶ ಸೇರಿದಂತೆ ಮರ ಕಡಿಯುತ್ತಾರೆ ಅಂತ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಅರಣ್ಯ ಇಲಾಖೆಯ ಬ್ರಹ್ಮಾಂಡ ಭ್ರಷ್ಟಚಾರದ ವಿರುದ್ಧ ಉಕ್ಕುಂದ ನಿವಾಸಿಯಾದ ಶಿವಕುಮಾರ್ ರವರು ಸಾರ್ವಜನಿಕ ಹಿತಾಸಕ್ತಿಯ ಕೇಸ್ಅನ್ನು ಜಿಲ್ಲಾ ನ್ಯಾಯಾಲಯದಲ್ಲಿ 2017 ರಲ್ಲಿ ದಾಖಲಿಸಿದ್ದರು. ವಾದ ವಿವಾದ ಅಲಿಸಿದ ಸತ್ರ ಹಾಗೂ ಪ್ರಧಾನ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ಭ್ರಷ್ಟಚಾರ ನಿಗ್ರಹ ದಳ ಮಾಡಬೇಕು ಎಂದು ಆದೇಶ ನೀಡಿದೆ. ಅಲ್ಲದೆ ಅದಷ್ಟು ಬೇಗ ತನಿಖೆ ನಡೆಸಿ ವರದಿಯನ್ನು ನೀಡುವಂತೆ ಸೂಚಿಸಿದೆ.
ನಿವೃತ್ತ ಉಪ ಅರಣ್ಯಾಧಿಕಾರಿ ಹನುಮಂತಪ್ಪ, ಮುಕುಂದ್ ಚಂದ್ ಸೇರಿದಂತೆ ಅಂದು ಡಿಸಿಎಫ್ ಆಗಿದ್ದ ಬಾಲಚಂದ್ರ, ಎಸಿಎಫ್ ಕೆ.ಎಸ್.ಭಟ್, ಆರ್ ಎಫ್ ಒ. ಮೋಹನ್ ಕುಮಾರ್ರವರನ್ನು ಸಹ ವಿಚಾರಣೆಗೆ ಒಳಪಡಿಸಬೇಕು ಎಂದು ಕೋರ್ಟ್ ಆದೇಶ ನೀಡಿದೆ ಎನ್ನುತ್ತಾರೆ ಶಿವಕುಮಾರ್ ಪರ ವಕೀಲರಾದ ಸೂರ್ಯೊಪ್ರಕಾಶ್ ರವರು. ಒಟ್ಟಾರೆ, ಅರಣ್ಯ ಇಲಾಖೆಯಲ್ಲಿ ನಡೆದ ಕೋಟ್ಯಾಂತರ ರೂ. ಭ್ರಷ್ಟಚಾರದ ಕುರಿತು ತನಿಖೆಗೆ ಆದೇಶ ನೀಡಿದ ನ್ಯಾಯಾಲಯದ ಕ್ರಮವನ್ನು ಅರಣ್ಯ ಪ್ರೇಮಿಗಳು ಸ್ವಾಗತ ಕೋರಿದ್ದು, ಅದಷ್ಟು ಬೇಗ ಎಸಿಬಿ ತನಿಖೆ ನಡೆಸಿ, ಅರಣ್ಯದ ಉಳಿವಿಗಾಗಿ ಸಹಕಾರ ನೀಡಿ, ಭ್ರಷ್ಟರಿಗೆ ಶಿಕ್ಷೆ ನೀಡಬೇಕಿದೆ.